October 29, 2026
Thursday, October 29, 2026
spot_img

‘ಓಂ’ ಪಾರ್ಟ್-2 ಬರಲ್ಲ, ಕಥೆ ಇಲ್ಲೇ ಕ್ಲೋಸ್! ನಿರ್ದೇಶಕ ರಾಜ್‌ಕುಮಾರ್ ಬಿಗ್ ಅಪ್ಡೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ಧನುಷ್ ಮತ್ತು ಮಮ್ಮುಟ್ಟಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ‘ಓಂ ಚಾಪ್ಟರ್ 1: ಉಧಿರಮ್ – ದಿ ಬ್ಲಡ್ ವುಡ್’ ಸಿನಿಮಾ ನವೆಂಬರ್ 20, 2026 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಶೀರ್ಷಿಕೆಯಲ್ಲಿ ‘ಚಾಪ್ಟರ್ 1’ ಎಂದ ತಕ್ಷಣವೇ ಇದು ಭಾಗ-1, ಭಾಗ-2 ಸರಣಿ ಸಿನಿಮಾನಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಈ ಕುರಿತು ನಿರ್ದೇಶಕರು ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ, “ಶೀರ್ಷಿಕೆಯಲ್ಲಿ ‘ಚಾಪ್ಟರ್ 1’ ಎಂದಿರುವುದನ್ನು ನೋಡಿ ಮುಂದಿನ ಭಾಗ ‘ಓಂ 2’ ಬರುತ್ತೆ ಎಂದು ನಿರೀಕ್ಷಿಸಬೇಡಿ. ಇದೊಂದು ಮುಂದುವರಿಯುವ ಸರಣಿ ಕಥೆಯಲ್ಲ. ಸಂಪೂರ್ಣ ಸಿನಿಮಾದ ಕಥೆ ಹಾಗೂ ಅದಕ್ಕಿರುವ ಉತ್ತರ ಈ ಮೊದಲ ಭಾಗದಲ್ಲೇ ಮುಕ್ತಾಯಗೊಳ್ಳಲಿದೆ” ಎಂದು ತಿಳಿಸಿದ್ದಾರೆ.

ಚಿತ್ರದ ಕಥಾಹಂದರದ ಬಗ್ಗೆ ಬೆಳಕು ಚೆಲ್ಲಿದ ನಿರ್ದೇಶಕರು, “ಒಂದು ನಿರ್ದಿಷ್ಟ ಕಾರಣಕ್ಕಾಗಿ ಚಿತ್ರದ ಪ್ರತಿಯೊಂದು ಪಾತ್ರವೂ ಹೇಗೆ ಒಂದಕ್ಕೊಂದು ಬೆಸೆದುಕೊಳ್ಳುತ್ತದೆ ಎಂಬುದೇ ‘ಓಂ’ ಸಿನಿಮಾದ ಮೂಲ ಕಥೆ. ಹೆಮ್ಮರದ ಕೊಂಬೆ-ರೆಂಬೆಗಳಂತೆ ಸಿನಿಮಾದಲ್ಲಿ ಹಲವು ಉಪ-ಕಥೆಗಳಿವೆ. ಇದನ್ನು ಬರಿ ‘ಗ್ಯಾಂಗ್‌ಸ್ಟರ್’ ಸಿನಿಮಾ ಎಂದು ಸಣ್ಣ ಮಟ್ಟದಲ್ಲಿ ವಿಭಾಗಿಸಲು ಸಾಧ್ಯವಿಲ್ಲ. ಇದರಲ್ಲಿ ಸಾಹಸ ಮತ್ತು ಕರುಣೆ ತುಂಬಿರುವ ಭಾವನಾತ್ಮಕತೆಯಿದೆ” ಎಂದಿದ್ದಾರೆ.

ಈ ಸಿನಿಮಾದಲ್ಲಿ ಮಮ್ಮುಟ್ಟಿ ಅವರ ಪಾತ್ರವು ಸಾಮಾನ್ಯ ಭೂಗತ ಲೋಕದ ಡಾನ್‌ನಂತಿರದೆ, ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಮಾರ್ಟಿನ್ ಸ್ಕಾರ್ಸೆಸೆ ಅವರ ಸಿನಿಮಾಗಳಲ್ಲಿ ಕಾಣಸಿಗುವ ಅಮೆರಿಕನ್ ವಲಸಿಗರ ಪಾತ್ರಗಳಿಂದ ಸ್ಫೂರ್ತಿ ಪಡೆದಿದೆ ಎಂದು ನಿರ್ದೇಶಕರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಜನಪ್ರಿಯ ನಟಿಯರಾದ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ತಮ್ಮ ಸಾಂಪ್ರದಾಯಿಕ ಇಮೇಜ್‌ಗಿಂತ ಸಂಪೂರ್ಣ ಭಿನ್ನವಾದ, ಪ್ರೇಕ್ಷಕರನ್ನು ಅಚ್ಚರಿಗೊಳಿಸುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೊಡ್ಡ ತಾರಾಗಣ ಹಾಗೂ ವಿಶಿಷ್ಟ ಕಥಾಹಂದರ ಹೊಂದಿರುವ ‘ಓಂ’ ಬೆಳ್ಳಿಪರದೆ ಮೇಲೆ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

Must Read

Skip to toolbar