Wednesday, October 5, 2022

Latest Posts

ಮಹನೀಯರ ಜನ್ಮದಿನದ ಪ್ರಯುಕ್ತ ಸೆ.17ರಿಂದ ಸೇವಾ ಪಾಕ್ಷಿಕ ಆಚರಣೆಗೆ ಸಿದ್ಧತೆ: ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು:
ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಸೆ.25ರಂದು ನಮ್ಮ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ದೀನದಯಾಳ್ ಉಪಾಧ್ಯಾಯರ ಜನ್ಮದಿನ. ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೆ. 17ರಿಂದ ಅಕ್ಟೋಬರ್ 2ರ ವರೆಗೆ ಸೇವಾ ಪಾಕ್ಷಿಕವನ್ನು ಆಚರಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೇ 17ರಂದು ಯುವ ಮೋರ್ಚಾ ವತಿಯಿಂದ ದೇಶಾದ್ಯಂತ ರಕ್ತದಾನ ಶಿಬಿರ ಏರ್ಪಡಿಸಲಾಗುವುದು. ರಕ್ತದಾನಿಗಳ ವಿವರವನ್ನು ಪ್ರತಿ ಆಸ್ಪತ್ರೆಯಲ್ಲಿ ತಯಾರಿಸಿ ರಕ್ತದಾನಿಗಳ ವಿವರ ಸಿಗುವಂತೆ ಮಾಡಲಾಗುವುದು. ಆರೋಗ್ಯ ಶಿಬಿರವನ್ನೂ ಆಯೋಜಿಸಲಾಗುವುದು. ಅಲ್ಲದೆ ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಣೆ ಶಿಬಿರ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.
ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಲ್ಲಿ 75 ಕೆರೆಗಳ ನಿರ್ಮಾಣಕ್ಕೆ ಸರಕಾರ ನಿರ್ದೇಶನ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಅಮೃತ ಸರೋವರ ನಿರ್ಮಾಣ ಆಗಿದೆ. ಈ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವರು. ಸಸಿಗಳನ್ನೂ ನೆಡಲಿದ್ದಾರೆ. 2025ಕ್ಕೆ ಭಾರತವು ಕ್ಷಯ ರೋಗದಿಂದ ಮುಕ್ತ ಆಗಬೇಕೆಂಬುದು ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಅದಕ್ಕಾಗಿ ಪ್ರತಿ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು 5 ಜನ ರೋಗಿಗಳಿಗೆ ಮಾರ್ಗದರ್ಶನ, ಚಿಕಿತ್ಸಾ ವ್ಯವಸ್ಥೆ, ಪೂರಕ ಬೆಂಬಲ ಕೊಡಲಿದ್ದಾರೆ ಎಂದರು.
]ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಹೆಸರನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ.ರಾಜಕಾಲುವೆಯನ್ನು ಒತ್ತುವರಿ ಮಾಡಿ ಕೆರೆಗಳನ್ನು ಮುಳುಗಿಸಿದ್ದು ಯಾರು? ಕೆರೆಗಳ ಮೇಲೆ ಅಕ್ರಮ ಬಡಾವಣೆಯಾಗಿ ನಿರ್ಮಿಸಿದವರು ಯಾರು ಎಂಬುದು ಜನರಿಗೆ ಗೊತ್ತಿದೆ.  ಈ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಯವರು ತಮ್ಮ ಜಲಧಾರೆ ಕಾರ್ಯಕ್ರಮದಿಂದ ರಾಜ್ಯದ ತುಂಬ ಮಳೆ ಆಗಿದೆ ಎಂದಿದ್ದಾರೆ. ಅವರಿಂದಲೇ ಮಳೆ ಆಗಿದ್ದರೆ ಅತಿವೃಷ್ಟಿಗೂ ಅವರೇ ಕಾರಣ ಇರಬೇಕಲ್ಲವೇ ಎಂದು ಕೆಣಕಿದರು. ರಾಮನಗರದ ಬಗ್ಗೆ ಕುಮಾರಸ್ವಾಮಿಗೆ ಜಾಸ್ತಿ ಪ್ರೀತಿ ಇದ್ದ ಕಾರಣ ಅಲ್ಲಿ ತಿ ಹೆಚ್ಚು ಮಳೆ ಬಂದಿರಬೇಕು ಎಂದು ಕಟಕಿಯಾಡಿದರು. ಎಚ್‌ಡಿಕೆ ಅವರು ಜಲಧಾರೆ ಮಾಡಿದ್ದು ಕರ್ನಾಟಕದಲ್ಲಿ, ಆದರೆ ದೇಶದ ತುಂಬೆಲ್ಲ ಮಳೆಯಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!