ಒಂದು ದೇಶ, ಒಂದು ಚುನಾವಣೆ: ಸೆ.23 ರಂದು ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಸಮಿತಿಯ ಮೊದಲ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಂದು ದೇಶ, ಒಂದು ಚುನಾವಣೆ ನೀತಿಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರ ನೇತೃತ್ವದಲ್ಲಿ ರಚಿಸಲಾದ ಪರಿಶೀಲನಾ ಸಮಿತಿಯು (Scrutiny Committee) ಸೆ.23 ರಂದು ತನ್ನ ಮೊದಲ ಸಭೆಯನ್ನು ನಡೆಸಲಿದೆ.

ಈ ಬಗ್ಗೆ ಸಮಿತಿಯ ಅಧ್ಯಕ್ಷ ರಾಮನಾಥ್ ಕೋವಿಂದ್ ಅವರು ಶನಿವಾರ ಮಾಹಿತಿ ನೀಡಿದ್ದು, ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಮುಗಿದ ಒಂದು ದಿನದ ನಂತರ ಸಭೆ ನಡೆಯಲಿದೆ. ಈಗಾಗಲೇ ಕಾನೂನು ಇಲಾಖೆ ಅಧಿಕಾರಿಗಳು ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಸೆಪ್ಟೆಂಬರ್​ 23 ರಂದು ಮೊದಲ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಇತ್ತೀಚೆಗೆ 8 ಸದಸ್ಯರ ಸಮಿತಿಯನ್ನು ರಚಿಸಿದೆ. ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ಸಮಿತಿಯ ಅಧ್ಯಕ್ಷರಾಗಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಮಾಜಿ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್, 15 ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಅವರು ಸದಸ್ಯರಾಗಿದ್ದಾರೆ.

ಆದರೆ, ಲೋಕಸಭೆಯ ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌಧರಿ ಅವರು ಸಮಿತಿಯ ಸದಸ್ಯರಾಗಿರಲು ನಿರಾಕರಿಸಿದ್ದಾರೆ.

ಈ ಸಮಿತಿಯು ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ, ವಿವಿಧ ರಾಜ್ಯಗಳ ವಿಧಾನಸಭೆಗಳು, ಪುರಸಭೆಗಳು, ಪಂಚಾಯತ್‌ಗಳಿಗೆ ಚುನಾವಣೆ ನಡೆಸುವ ಬಗ್ಗೆ ಅಧ್ಯಯನ ನಡೆಸಲಿದೆ. ಸಮಿತಿಯು ಅತಂತ್ರ ಫಲಿತಾಂಶ, ಅವಿಶ್ವಾಸ ನಿರ್ಣಯ, ಪಕ್ಷಾಂತರ ಸೇರಿದಂತೆ ಏಕಕಾಲದ ಚುನಾವಣೆಗಳಿಗೆ ಸಂಬಂಧಿಸಿದ ಸಂಭಾವ್ಯ ಸಮಸ್ಯೆ ಮತ್ತು ಅವುಗಳಿಗೆ ಪರಿಹಾರಗಳನ್ನು ವಿಶ್ಲೇಷಿಸಿ, ಶಿಫಾರಸು ಮಾಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!