ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಹಾವೇರಿ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಿದೆ: ಸಿ.ಟಿ.ರವಿ

ಹೊಸದಿಗಂತ ವರದಿ, ಹಾವೇರಿ:

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರವೇ ಹಾವೇರಿ ಜಿಲ್ಲೆಯ ಅಭಿವೃದ್ಧಿ ಪಥದತ್ತ ಸಾಗುವುದಕ್ಕೆ ಸಾಧ್ಯವಾಗಿದೆ. ಬಿಜೆಪಿ ಬಂದ ನಂತರದಲ್ಲಿ ಜಿಲ್ಲೆಗೆ ದೊಡ್ಡ ದೊಡ್ಡ ಯೋಜನೆಗಳು ಬರುವುದಕ್ಕೆ ಸಾಧ್ಯವಾಯಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಶನಿವಾರ ನಗರದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಮೊಟ್ಟ ಮೊದಲಿಗೆ ಇಂಜನೀಯರಿಂಗ್ ಕಾಲೇಜನ್ನು ತರಲಾಯಿತು. ನಂತರದಲ್ಲಿ ವೈದ್ಯಕೀಯ ಕಾಲೇಜನ್ನು ಮಂಜೂರ ಮಾಡಲಾಗಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸುವುದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಲಾಗಿದೆ. ಇತ್ತೀಚೆಗೆ ಹಾವೇರಿ ತಾಲೂಕಿನಲ್ಲಿ ನಂದಿನಿ ಹಾಲಿನ ಮೆಗಾ ಡೈರಿಯನ್ನು ಪ್ರಾರಂಭಿಸಲಾಗಿದೆ. ಬಿಜೆಪಿ ಬಂದ ನಂತರದಲ್ಲಿ ಬ್ಯಾಡಗಿ ಮೆಣಸಿನ ಕಾಯಿ ಸಂಶೋಧನಾ ಕೇಂದ್ರ, ನೂತನ ವಿಶ್ವ ವಿದ್ಯಾನಿಲಯ, ಹಾವೇರಿ ಬೈಪಾಸ್ ರಸ್ತೆ ಬಂದವು ಎಂದರು.
ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಹಾವೇರಿ ಕ್ಷೇತ್ರದಲ್ಲಿ ಪಯಾವುದೇ ಮಹತ್ವದ ಯೋಜನೆಗಳನ್ನು ಜಾರಿಗೆ ತರಲಿಲ್ಲ ಬದಲಿಗೆ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಂಜೂರ ಮಾಡಲಾದ ವೈದ್ಯಕೀಯ ಕಾಲೇಜನ್ನು ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಲೇ ಇಲ್ಲ. ವೈದ್ಯಕೀಯ ಕಾಲೇಜ್ ಆರಂಭಿಸುವುದಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಗೆದ್ದರೆ ಹಾವೇರಿ, ಕರ್ನಾಟಕ ಮತ್ತು ದೇಶ ಸೋತಂತೆ, ಕಾಂಗ್ರೆಸ್ ಗೆದ್ದರೆ ಕುಕ್ಕರ ಬಾಂಬ್ ಬಿದ್ದಂತೆ. ನಮಗೆ ದೇಶ ಭಕ್ತ ಪ್ರಧಾನಿ ನರೇಂದ್ರ ಮೋದಿ, ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಕಾಮನ್ ಮ್ಯಾನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಕು ಎಂದರೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಮಲವನ್ನು ಅರಳಿಸುವ ಸಂಕಲ್ಪವನ್ನು ಕಾರ್ಯಕರ್ತರು ಮಾಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಪರ ಇರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿರಿ ಎಂದು ಮತದಾರರಲ್ಲಿ ವಿನಂತಿಸಿಕೊಂಡರು.
ಬಿಜೆಪಿ ಸರ್ಕಾರ ಯಾವತ್ತಿದ್ದರೂ ಅಭಿವೃದ್ಧಿ ಪರ, ದಲಿತರ ಪರ, ಮಹಿಳೆಯರ ಪರ ಇರುವ ಸರ್ಕಾರ ಬರುವುದಕ್ಕೆ ಹಿಂದುಳಿದ ಪರ ಇರುವ ಸಬ್‌ಕಾ ಸಬ್‌ಕಾ ವಿಕಾಸ್ ಸರ್ಕಾರವಾದ ಬಿಜೆಪಿ ಗೆಲ್ಲುವುದಕ್ಕೆ ಕಾರ್ಯಕರ್ತರು ಕಂಕಣ ಬದ್ಧರಾಗುವಂತೆ ಕರೆ ನೀಡಿದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ ಅವಧಿ ಮುಗಿದಿದೆ. ಅವರು ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್‌ಗೆ ಬರುವ ದಿನಗಳಲ್ಲಿ ಬೆಲೆ ಇಲ್ಲ. ಅವರು ಹೇಳುತ್ತಿರುವುದು ಎಲ್ಲವೂ ಸುಳ್ಳಿನ ಕಂತೆ. ಕಾಂಗ್ರೆಸ್ ಪಕ್ಷಕ್ಕೆ ಅವಧಿ ಮುಗಿದು ಎಕ್ಸ್‌ಪಾಯಿರಿ ಆಗಿದೆ. ಕಾಂಗ್ರೆಸ್ ಗ್ಯಾರಂಟಿ ಅನ್ನೋದು ಒಂದು ಫಾಲ್ಸ್ ಕಾರ್ಡ್ ಆಗಿದೆ. ಈ ಫಾಲ್ಸ್ ಕಾರ್ಡ್ ಬದಲಾಗಿ ನಾವು ಜನರಿಗೆ ಅಭಿವೃದ್ಧಿ ಕಾರ್ಯಗಳ ಕಾರ್ಡ್ ನೀಡುತ್ತೇವೆ ಎಂದು ತಿಳಿಸಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. ಈ ಯಾತ್ರೆಯಲ್ಲಿಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಲಿಂಗರಾಜ ಪಾಟೀಲ ಸೇರಿದಂತೆ ಅನೇಕರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!