September 29, 2026
Tuesday, September 29, 2026
spot_img

ಅಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್‌

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಸಲ್ಲಿಸಿದ ಅರ್ಜಿದಾರರ ಅರ್ಜಿಯನ್ನು ಆಲಿಸಿದ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ,ಅರ್ಜಿದಾರರಿಗೆ ಮಾತ್ರ ಪೂಜೆಗೆ ಅನುಮತಿ ನೀಡಿ ಆದೇಶಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿಯ ಪವಿತ್ರ ದಿನದಂದು ಹದಿನೈದು ಜನ ಹಿಂದು ಮುಖಂಡರಿಗೆ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಅರ್ಜಿದಾರರಾದ ಸಿದ್ರಾಮಯ್ಯ ಹಿರೇಮಠ ಕಲಬುರಗಿ ಹೈಕೋರ್ಟ್ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಪೀಠ,ಕೇವಲ ಅರ್ಜಿದಾರರು ಮಾತ್ರ ಪೂಜೆ ಸಲ್ಲಿಸುವಂತೆ ಗ್ರೀನ್ ಸಿಗ್ನಲ್ ನೀಡಿದೆ.

ಇನ್ನೂ,ಒಂದು ವೇಳೆ ಮತ್ಯಾರಾದರೂ ಶಿವಲಿಂಗಕ್ಕೆ ಪೂಜೆ ಸಲ್ಲಿಸುವುದಾಗಿ ಅರ್ಜಿ ಸಲ್ಲಿಸಿದ್ದೆಯಾದಲ್ಲಿ,ಈ ಕುರಿತು ಸ್ಥಳೀಯ ಜಿಲ್ಲಾಡಳಿತವೇ ತೀರ್ಮಾನ ಕೈಗೊಳ್ಳುವಂತೆ ಆದೇಶಿಸಿ, ಮಧ್ಯಾಹ್ನ ೨ ಗಂಟೆಯಿಂದ ಸಾಯಂಕಾಲ ೬ ಗಂಟೆ ಒಳಗಾಗಿ ಪೂಜೆಗೆ ಅವಕಾಶ ನೀಡಿ ಆದೇಶ ಮಾಡಿದೆ.

ಜೊತೆಗೆ ಪೂಜೆ ಸಲ್ಲಿಸಲು ತೆರಳುವ ಅರ್ಜಿದಾರರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಸೂಚಿಸಿದ್ದು,ಕಾನೂನು ಸುವ್ಯವಸ್ಥೆ ಉಲ್ಲಂಘನೆ ಮಾಡಿದರೇ ಕಠಿಣ ಕ್ರಮಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.

Must Read