ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಎಷ್ಟೇ ಒಗ್ಗಟ್ಟಾಗಿದ್ದರೂ ಅವರ ಆಂತರಿಕ ಭಿನ್ನಾಭಿಪ್ರಾಯಗಳು, ಸಂಘರ್ಷಗಳು ಆಗಾಗ ಬಯಲಿಗೆ ಬರುತ್ತಲೇ ಇರುತ್ತವೆ. ಕೆಲ ದಿನಗಳ ಹಿಂದೆ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಎಂ ಜೊತೆಗಿನ ಔತಣಕೂಟದಲ್ಲಿ ಕೆಲ ಮುಖಂಡರು ಪಾಲ್ಗೊಂಡಿದ್ದು ಸಾಕಷ್ಟು ಸಂಚಲನ ಮೂಡಿಸಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಣಗಳ ನಡುವಿನ ವಿವಾದ ವಿಕೋಪಕ್ಕೆ ಹೋಗಿದೆ. ಇದು ಈಗ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿದೆ.
ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮೂಲಕ, ಪ್ರತಿಪಕ್ಷಗಳಿಗೆ ತಾವೇ ಅಸ್ತ್ರ ಕೊಟಂತೆ ಆಗಿದೆ. ಪ್ರಮುಖ ರಾಜಕಾರಣಿಗಳು ಇಂತಹ ಬಹಿರಂಗ ಟೀಕೆಗಳನ್ನು ವ್ಯಕ್ತಪಡಿಸಿದರೆ ಪಕ್ಷಕ್ಕೆ ಹಾನಿಯಾಗುವುದು ಖಂಡಿತ. ಇದನ್ನು ತಡೆಯದಿದ್ದಲ್ಲಿ ಸರ್ಕಾರದ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗಲಿದೆ ಎಂದು ಕೆಲ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಡಿಸಿಎಂ ಜೊತೆ ನಡೆದ ಸಭೆಯಲ್ಲಿ ಹಿರಿಯ ನಾಯಕರು ಈ ಆತಂಕ ತೋಡಿಕೊಂಡಿದ್ದರು. ಜನವರಿ 16, ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವ ಹಿರಿಯ ನಾಯಕರು ಇದೇ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.