ಹೊಸದಿಗಂತ ಡಿಜಿಟಲ್ ಡೆಸ್ಕ್:
ನಡೆಯುತ್ತಿರುವ ಯುದ್ಧದ ನಡುವೆ ‘ಆಪರೇಷನ್ ಅಜಯ್’ ಅಡಿಯಲ್ಲಿ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರ ಮೊದಲ ಬ್ಯಾಚ್ ಅನ್ನು ಹೊತ್ತ ವಿಮಾನ ಶುಕ್ರವಾರ ಬೆಳಿಗ್ಗೆ ದೆಹಲಿಗೆ ಬಂದಿಳಿಯಿತು.
ಇಸ್ರೇಲ್‌ನಿಂದ 212 ಭಾರತೀಯರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಜೆಗಳನ್ನು ಸ್ವಾಗತಿಸಿದರು. ಹಿಂದಿರುಗಿದ ಭಾರತೀಯರಿಗೆ ಕೈ ಜೋಡಿಸಿ, ನಮಸ್ಕರಿಸುತ್ತಾ ಬರಮಾಡಿಕೊಂಡರು. ನಂತರ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.
ಪ್ರತಿಯೊಬ್ಬ ಭಾರತೀಯನ ಸುರಕ್ಷತೆಗೆ ಭಾರತದ ಬದ್ಧತೆ ಅಚಲವಾಗಿದೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದರು. ಎಲ್ಲರನ್ನು ರಕ್ಷಿಸಲು ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ ಭಯಪಡಬೇಡಿ ಎಂದು ಧೈರ್ಯ ತುಂಬಿದರು.
“ನಮ್ಮ ಸರ್ಕಾರವು ಭಾರತೀಯನನ್ನು ಎಂದಿಗೂ ಬಿಡುವುದಿಲ್ಲ. ನಮ್ಮ ಸರ್ಕಾರ, ನಮ್ಮ ಪ್ರಧಾನಿ ನಮ್ಮವರನ್ನು ರಕ್ಷಿಸಿ ಸುರಕ್ಷಿತವಾಗಿ ಮನೆಗೆ ಕರೆತರುವ ಸಂಕಲ್ಪ ಮಾಡಿದ್ದಾರೆ. ಇಎಎಂ ಡಾ ಎಸ್ ಜೈಶಂಕರ್, ವಿದೇಶಾಂಗ ಸಚಿವಾಲಯದ ತಂಡ, ವಿಮಾನ ಸಿಬ್ಬಂದಿಗೆ ನಾವು ಕೃತಜ್ಞರಾಗಿರುತ್ತೇವೆ” ಎಂದರು.
ಇನ್ನೂ ಇಸ್ರೇಲ್‌ನಿಂದ ಭಾರತಕ್ಕೆ ಬಂದ ಪ್ರಜೆಗಳು ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ʻನಮ್ಮನ್ನು ಮರಳಿ ಕರೆತಂದ ಭಾರತ ಸರ್ಕಾರಕ್ಕೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವು ತುಂಬಾ ಕೃತಜ್ಞರಾಗಿದ್ದೇವೆʼ ಎಂದರು.