ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ, ಇತ್ತ ಮಹಾರಾಷ್ಟ್ರದಲ್ಲೂ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯ ರಾಜಕಾರಣದಲ್ಲಿ ಸದ್ಯ ‘ಆಪರೇಷನ್ ಟೈಗರ್’ ಕುರಿತ ಚರ್ಚೆ ತೀವ್ರಗೊಂಡಿದ್ದು, ಠಾಕ್ರೆ ಪಾಳಯದಲ್ಲಿ ಆತಂಕ ಮೂಡಿಸಿದೆ.
ಮಾತೋಶ್ರೀ ಸಭೆಗೆ ಗೈರಾದ ಸಂಸದರು!
ಇತ್ತೀಚೆಗೆ ಉದ್ಧವ್ ಠಾಕ್ರೆ ಅವರು ಮುಂಬೈನ ‘ಮಾತೋಶ್ರೀ’ ನಿವಾಸದಲ್ಲಿ ಕರೆದಿದ್ದ ಮಹತ್ವದ ಸಭೆಯು ಈ ಅನುಮಾನಗಳಿಗೆ ಪುಷ್ಟಿ ನೀಡಿದೆ. ಶಿವಸೇನೆ ಬಣದ ಒಟ್ಟು 9 ಸಂಸದರ ಪೈಕಿ ಕೇವಲ 4 ಮಂದಿ ಮಾತ್ರ ಸಭೆಗೆ ಹಾಜರಾಗಿದ್ದು, ಬರೋಬ್ಬರಿ 5 ಸಂಸದರು ಗೈರುಹಾಜರಾಗಿದ್ದಾರೆ. ಇದು ಉದ್ಧವ್ ಬಣದಲ್ಲಿ ತಲ್ಲಣ ಸೃಷ್ಟಿಸಿದೆ.
ಏನಿದು ‘ಆಪರೇಷನ್ ಟೈಗರ್’?
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕರು ಈ ಆಪರೇಷನ್ ಕುರಿತು ಸಂಚಲನದ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿಂಧೆ ಬಣದ ವಿಧಾನಪರಿಷತ್ ಸದಸ್ಯ ಕೃಪಾಲ್ ತುಮಾನೆ, “ಆಸ್ಪತ್ರೆಯಲ್ಲಿ ಸರ್ಜರಿಗೂ ಮುನ್ನ ರೋಗಿಯ ತಪಾಸಣೆ ನಡೆಸುವಂತೆ, ನಮ್ಮ ‘ಆಪರೇಷನ್ ಟೈಗರ್’ನ ಎಲ್ಲಾ ಸಿದ್ಧತೆಗಳೂ ಮುಕ್ತಾಯವಾಗಿವೆ. ಕೇವಲ ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿಯಾಗಬೇಕಿದೆ” ಎಂದಿದ್ದಾರೆ.
ಮುಂಗಾರು ಅಧಿವೇಶನಕ್ಕೂ ಮುನ್ನವೇ ಸರ್ಜರಿ?
ಉದ್ಧವ್ ಬಣದ 7 ಸಂಸದರು ಮತ್ತು 16 ಶಾಸಕರು ಸದ್ಯ ಶಿಂಧೆ ಪಾಳಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಮುನ್ನವೇ ಈ ಮಹತ್ವದ ರಾಜಕೀಯ ಸ್ಥಿತ್ಯಂತರ ನಡೆಯಲಿದ್ದು, ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ದೊಡ್ಡ ಸೀಳು ಮೂಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.



