ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದವರು ಇಂದು ಬಲವಂತವಾಗಿ ಬೆಂಬಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ವಿಪಕ್ಷಗಳ ಒಕ್ಕೂಟ ಇಂಡಿಯಾ ಹೆಸರೇಳದೆ ಚಾಟಿ ಬೀಸಿದ್ದಾರೆ.
ವಾರಾಣಸಿಯಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ಸಂಸತ್ತಿನ ಉಭಯ ಸದನದಲ್ಲಿ ಮಸೂದೆ ದಾಖಲೆ ಮತಗಳ ಅಂತರದೊಂದಿಗೆ ಅಂಗೀಕಾರವಾಗಿದೆ.ವಿರೋಧ ಪಕ್ಷಗಳು ಭಯದಿಂದಾಗಿ ಈ ಮಸೂದೆಗೆ ಬೆಂಬಲ ಸೂಚಿಸಿವೆ ಎಂದು ಟೀಕಿಸಿದ್ಧಾರೆ.
ಎಲ್ಲಾ ಪಕ್ಷಗಳ ಸದಸ್ಯರು ನಿಮ್ಮನ್ನು (ಮಹಿಳೆಯರು) ಕಂಡರೆ ಭಯ ಪಡುತ್ತಾರೆ. ಅದಕ್ಕಾಗಿಯೇ ಮಸೂದೆಯನ್ನು ಬೆಂಬಲಿಸಿದ್ದಾರೆ. ಅದರಲ್ಲಿ ಕೆಲವು ಪಕ್ಷಗಳ ಸದಸ್ಯರು ಮಸೂದೆಯಲ್ಲಿ ಬಳಸಲಾಗಿರುವ ವಂದನ್ ಎಂಬ ಪದದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಅವರಿಗೆ ಮಹಿಳೆಯರಿಗೆ ಕಿಂಚಿತ್ತೂ ಗೌರವ ಕೊಡಬೇಕು ಎಂಬ ಅರಿವಿಲ್ಲದಿರುವುದಕ್ಕೆ ಆ ರೀತಿ ಮಾತನಾಡಿದ್ದಾರೆ ಎಂದು ಚಾಟಿ ಬೀಸಿದರು .
ಚಂದ್ರಯಾನ-3 ಯಶಸ್ಸಿನಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಪುರುಷರಿಗಿಂತ ತಾವೇನು ಕಡಿಮೆ ಇಲ್ಲವೆಂದು ಮಹಿಳೆಯರು ನಿರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.