ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಊಟದ ವಿರಾಮದ ನಂತರದ ಚರ್ಚೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಐ ಆ್ಯಮ್ ಸಿದ್ದರಾಮಯ್ಯ, ಐ ಆ್ಯಮ್ ನಾಟ್ ಗೋಪಾಲ ಗೌಡ, ಐ ಆ್ಯಮ್ ನಾಟ್ ದೇವವರಾಜ ಅರಸ್’ ಎಂದು ಘರ್ಜಿಸಿದರು.
ಇದು ಯಾಕೆ ಅಂತೀರಾ? ಅಧಿವೇಶನದಲ್ಲಿ ಬಜೆಟ್ ಮೇಲೆ ಚರ್ಚೆ ಮಂಡಿಸಲು ಸಿದ್ದರಾಮಯ್ಯ ಅವರನ್ನು ಸದನ ಕಾಯುತ್ತಿತ್ತು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಸಿದ್ದರಾಮಯ್ಯರನ್ನು ಹಾಸ್ಯವಾಗಿ ಕಾಲೆಳೆಯುವ ಪ್ರಯತ್ನ ಮಾಡಿದರು.
ಸಿದ್ದರಾಮಯ್ಯ ಅವರು ಶಾಸಕ ಯತ್ನಾಳ್ ಅವರನ್ನುದ್ದೇಶಿಸಿ, ನೀವು ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಮತ್ತೆ ನಿಮಗೇಕೆ ಈ ಚಿಂತೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ನಾನು ಮುಖ್ಯಮಂತ್ರಿ ಆದರೆ ಮತ್ತೆ ನಿಮ್ಮ ಸರಕಾರ ಬರಲ್ಲ. 20 ವರ್ಷ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದರು. ಅದಕ್ಕೇ ನಿಮ್ಮನ್ನು ಮಂತ್ರಿ ಮಾಡಿಲ್ಲ ಎಂದು ಸಿದ್ದರಾಮಯ್ಯ ಹಾಸ್ಯ ಮಾಡಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮುಖಂಡರ ನಡುವಿನ ಹುಳುಕು… ಮಾಧ್ಯಮಗಳ ದೃಷ್ಟಿ … ಹೀಗೆ ನವಿರಾದ ಹಾಸ್ಯದೊಂದಿಗೆ ಶುರುವಾದ ಚರ್ಚೆ ಒಂದು ಹಂತಕ್ಕೆ ಗಂಭೀರ ಸ್ವರೂಪ ಪಡೆಯಿತು. ಆಗ ಎಂಟ್ರಿ ಆಗಿದ್ದು ಸಚಿವ ಸೋಮಣ್ಣ. ಸಿದ್ದರಾಮಯ್ಯ ಅವರೇ ಸೋಮಣ್ಣ ಅವರ ಹೆಸರು ಹೇಳಿದ್ದರಿಂದ ಎದ್ದು ನಿಂತ ಅವರು, ಸಿದ್ದರಾಮಯ್ಯ ಅವರೇ ತಾವು ಚರ್ಚೆ ಶುರು ಮಾಡಿ, ಗಾಂಭೀರ್ಯವಾಗಿ ಪ್ರತಿಯೊಂದನ್ನೂ ನಾವು ನೋಡುತ್ತಿದ್ದೇವೆ. ಯಾವುದಾದರೂ ಒಂದು ಸಬ್ಜೆಕ್ಟ್ ಅನ್ನು ನೀವು ಹೇಳುವಾಗ ಮುಂದಕ್ಕೆ ಹೋಗ್ತಾ ಇದ್ದರೆ, ನಾವು ಕೇಳುವುದಕ್ಕೆ ಇಂಪಾಗಿರುತ್ತದೆ ಎಂದರು.
ಸುಬ್ರಾಯನ ಕೆರೆ ಭಾಷಣ ಮಾಡಲು ಆಗಲ್ಲ:
ಸೋಮಣ್ಣ ನೀವು ಹೇಳಿದ್ದು ನನಗೆ ಅರ್ಥವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು. ಬಳಿಕ ಮಾತು ಮುಂದುವರಿಸಿದ ಸಿದ್ದರಾಮಯ್ಯ, ನೀವೂ ಬುದ್ಧಿವಂತರಿದ್ದೀರಿ, ಬಹಳಷ್ಟು ವರ್ಷ ರಾಜಕಾರಣ ಮಾಡಿದ್ದೀರಿ, ಕೆಲಸ ಮಾಡಿದ್ದೀರಿ. ನಾನು ಮಾತಾಡುವುದು ಅಂಕಿ ಅಂಶಗಳ ಆಧಾರದ ಮೇಲೆ. ಬಜೆಟ್ ಮೇಲೆ ಮಾತಾಡುವಾಗ ಸುಬ್ರಾಯನ ಕೆರೆ ಭಾಷಣ ಮಾಡಲು ಆಗಲ್ಲ ಮೈಸೂರಿನಲ್ಲಿ ಸುಬ್ರಾಯನ ಕೆರೆ ಒಂದಿದೆ. ಬೇರೆ ಕಡೆ ಸಂತೆ ಭಾಷಣ ಅಂತಾರೆ ಎಂದರು.
ಈ ವೇಳೆ ಮತ್ತೆ ಮಧ್ಯ ಪ್ರವೇಶಿಸಿದ ಸೋಮಣ್ಣ ಅವರು, ನಾನು ಹೇಳಿದ್ದು ಶಾಂತವೇರಿ ಗೋಪಾಲಗೌಡ್ರು, ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ದೇವೇಗೌಡ್ರು, ದೇವರಾಜ ಅರಸ್ ಅವರಂತಹ ಅನೇಕ ಮುಖಂಡರ ಭಾವನೆಗಳನ್ನು ತಾವು ಅರ್ಥ ಮಾಡಿಕೊಂಡಿದ್ದೀರಿ. ಸದನದಲ್ಲಿ ಗೋಪಾಲ ಗೌಡ್ರು, ಜೆ.ಎಚ್. ಪಟೇಲ್, ಮಲ್ಲಿಕಾರ್ಜುನ ಖರ್ಗೆ ಅವರ ಚರ್ಚೆಗಳನ್ನು ನೋಡಿದ್ದೇವೆ. ನಾನು ಬೇಸರವಾದಾಗ ಕೆಲವು ಪುಸ್ತಕಗಳನ್ನು ಓದುತ್ತೇನೆ. ಅಂತಹ ವ್ಯವಸ್ಥೆಗೆ ತಾವೂ ಬರಬೇಕು ಎಂಬ ಆಶಯ. ಪಕ್ಷಾತೀತವಾಗಿ ಆಡಳಿತ ವ್ಯವಸ್ಥೆ ಕುಸಿಯುವ ಸಂದರ್ಭದಲ್ಲಿ ನಾವು ಹಂಚುವ ಅನುಭವ ಸಹಕಾರಿಯಾಗುತ್ತದೆ. ಆ ಪಂಕ್ತಿಯಲ್ಲಿ ಸಿದ್ದರಾಮಯ್ಯ ಅವರು ಹೋಗಲಿ ಎನ್ನುವ ಭಾವನೆ ನನ್ನದು ಎಂದು ಹೇಳಿದರು.
ನಾನು ನಿಮ್ಮ ಪಂಕ್ತಿಗೂ ಸೇರಲ್ಲ, ಯಾರ ಪಂಕ್ತಿಗೂ ಸೇರಲ್ಲ. ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ. ದೇವರಾಜ ಅರಸ್, ಎಸ್.ಎಂ. ಕೃಷ್ಣ, ಸಾಹುಕಾರ್ ಚೆನ್ನಯ್ಯ… ಯಾರೊಂದಿಗೂ ನನ್ನನ್ನು ಹೋಲಿಕೆ ಮಾಡಲು ಹೋಗುವುದಿಲ್ಲ. ನಿಮಗೂ ಹೋಲಿಕೆ ಮಾಡಲ್ಲ. ಮಹಾತ್ಮಗಾಂಧಿ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್, ಲೋಹಿಯಾ, ಗೋಪಾಲ ಗೌಡ ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಾ? ನಿಮ್ಮ ವ್ಯಕ್ತಿತ್ವ ನಿಮಗೆ, ನನ್ನ ವ್ಯಕ್ತಿತ್ವ ನನಗೆ. ಸೋಮಣ್ಣ ನೀವು ಹೇಳುವುದು ನನಗೆ ಅರ್ಥವಾಗಿದೆ, ಅವರ ಮಟ್ಟಕ್ಕೆ ನೀವು ಬಂದಿಲ್ಲ, ನಿಮ್ಮಿಂದ ಬರಲು ಸಾಧ್ಯವಿಲ್ಲ ಎಂದು ಹೇಳುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇ? ಸೋಮಣ್ಣ ನೀವು ಬರುವುದಕ್ಕೆ ಬಹಳಷ್ಟು ವರ್ಷ ಮೊದಲೇ ನಾನು ಎಂಎಲ್‌ಎ ಆಗಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಚರ್ಚೆಯ ಗತಿ ಬೇರೆಯದೇ ಲಯಕ್ಕೆ ತಿರುಗಿತು.
ಸೋಮಣ್ಣನ ಸರ್ಟಿಫಿಕೇಟ್ ಬೇಕಾಗಿಲ್ಲ:
ಸೋಮಣ್ಣ ನನಗೆ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳುವಾಗ, ಮತ್ತೆ ಸೋಮಣ್ಣ ಎದ್ದು ನಾನು ಆ ರೀತಿ ಮಾತಾಡಿಲ್ಲ ಎಂದು ಸಮರ್ಥನೆ ಮಾಡಲು ಬಂದರು. ಆಗ ಕಿರುಚಾಡಿದ ಸಿದ್ದರಾಮಯ್ಯ, ಐ ಡುನಾಟ್ ವಾಂಟ್ ಎನಿ ಸರ್ಟಿಫಿಕೇಟ್ ಫ್ರಂ ಯು… ಐ ಆ್ಯಮ್ ಸಿದ್ದರಾಮಯ್ಯ, ಐ ಆ್ಯಮ್ ನಾಟ್ ಗೋಪಾಲ ಗೌಡ, ಐ ಆ್ಯಮ್ ನಾಟ್ ದೇವವರಾಜ ಅರಸ್. ನಾನು ಸಿದ್ದರಾಮಯ್ಯನೇ ಆಗುವುದು ಎಂದು ಘರ್ಜಿಸಿದರು. ಕೂತ್ಕೋ ಎಂದು ಏಕವಚನದಲ್ಲೇ ಸೋಮಣ್ಣ ಅವರನ್ನು ಗದರಿದರು.
ವೈಕುಂಠ ಬಾಳಿಗಾ ಅವರನ್ನು ನಾನು ನೋಡಿದ್ನಾ? ದೇವರಾಜ ಅರಸ್, ಗೋಪಾಲ ಗೌಡ ಅವರಿದ್ದಾಗ ಸದಸನದಲ್ಲಿ ಇದ್ನಾ ನಾನು? ಆ ಕಾಲ ಬೇರೆ ಈ ಕಾಲ ಬೇರೆ, 1970ಕ್ಕಿಂತ ಹಿಂದಿನ ರಾಜಕಾರಣ ಬೇರೆ. ಆಗ ಸ್ವಾತಂತ್ರ್ಯ ಬಂದಿರುವ ಕಾಲವಿತ್ತು, ಜನರು ಪ್ರಾಮಾಣಿಕವಾಗಿದ್ರು. ಇವತ್ತು ಪ್ರಾಮಾಣಿಕವಾಗಿದ್ದಾರಾ? ಆತ್ಮ ಮುಟ್ಟಿಕೊಂಡು ಹೇಳಿ ನೋಡೋಣ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಅಂತಿಮವಾಗಿ ಉಪ ಸಭಾಧ್ಯಕ್ಷ ಆನಂದ ಚಂದ್ರಶೇಖರ ಮಾಮನಿ ಅವರು ಬಜೆಟ್ ಮೇಲೆ ಮಾತಾಡುವಂತೆ ವಿನಂತಿಸಿದರು. ಸಚಿವ ಆರ್. ಅಶೋಕ್ ಕೂಡ ಸಿದ್ದರಾಮಯ್ಯ ಅವರನ್ನು ಸಮಾಧಾನಿಸಿದರು.