July 8, 2026
Wednesday, July 8, 2026
spot_img

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳು ಗರಂ: ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಕಡಿಮೆ ಎಂದ ಕೇಂದ್ರ ಸರ್ಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮವಾಗಿ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಉಂಟಾಗಿದ್ದು, ಜಗತ್ತಿನ ಬಹುತೇಕ ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ತೀವ್ರವಾಗಿ ಏರಿಕೆಯಾಗಿದ್ದು, ಭಾರತದಲ್ಲಿ 2022 ರಿಂದ ಬಹುತೇಕ ಸ್ಥಿರವಾಗಿದ್ದ ಇಂಧನ ಬೆಲೆಯನ್ನು 4 ವರ್ಷಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 3 ರೂ.ಗಳಷ್ಟು ಹೆಚ್ಚಿಸಲಾಗಿದೆ. ಜಾಗತಿಕ ತೈಲ ಪೂರೈಕೆ ವ್ಯವಸ್ಥೆಯಲ್ಲಿ ಅಸ್ತವ್ಯಸ್ತತೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿನ ಇಂಧನ ದರದಲ್ಲಿ ಮಾಡಲಾದ ಈ ಏರಿಕೆಯನ್ನು ಕೇಂದ್ರ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಮಾಡಲಾದ ತಲಾ 3 ರೂ. ಏರಿಕೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಈ ಇಂಧನ ದರ ಏರಿಕೆಯು ಇತರ ದೇಶಗಳೊಂದಿಗಿನ ಹೋಲಿಕೆಯಲ್ಲಿ ಅತ್ಯಲ್ಪವಾಗಿದೆ ಎಂಬುದನ್ನು ಅಂಕಿ-ಅಂಶಗಳೊಂದಿಗೆ ಎತ್ತಿತೋರಿದ್ದಾರೆ.

ಹಲವಾರು ದೇಶಗಳಲ್ಲಿ ಇಂಧನ ದರಗಳು ಶೇ.20 ರಿಂದ ಶೇ.100 ವರೆಗೆ ಹೆಚ್ಚಳ ಕಂಡಿದ್ದರೆ, ಭಾರತದಲ್ಲಿ ಪೆಟ್ರೋಲ್ ದರ ಶೇ.3.2 ಮತ್ತು ಡೀಸೆಲ್ ಶೇ. 3.4 ರಷ್ಟು ಮಾತ್ರ ಏರಿಕೆಯಾಗಿದೆ ಎಂದಿದ್ದಾರೆ.

ಸರ್ಕಾರದ ಕ್ರಮವನ್ನು “ಜನಹಿತದ ಆರ್ಥಿಕ ನಿರ್ವಹಣೆ” ಎಂದು ಹೇಳಿರುವ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 100 ಡಾ. ದಾಟಿದ ಸಂದರ್ಭದಲ್ಲೂ, ಸಾರ್ವಜನಿಕ ವಲಯದ ತೈಲ ಕಂಪನಿಗಳು ತಾವೇ ನಷ್ಟವನ್ನು ಹೊತ್ತುಕೊಂಡು ಗ್ರಾಹಕರ ಮೇಲೆ ತಕ್ಷಣದ ಭಾರ ಬೀಳದಂತೆ ನೋಡಿಕೊಂಡಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿನ ತೈಲ ಬೆಲೆ ತೀವ್ರ ಏರಿಕೆಯ ಹೊರತಾಗಿಯೂ ,ಭಾರತೀಯರ ಹಿತಕಾಯುವುದಕ್ಕೆ ಗರಿಷ್ಠ ಆದ್ಯತೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿರುವ ಅವರು, ಆರ್ಥಿಕ ಸ್ಥಿರತೆ ಮತ್ತು ಸಾರ್ವಜನಿಕ ಕಲ್ಯಾಣವನ್ನು ಸಮತೋಲನಗೊಳಿಸುವ ನೀತಿಯನ್ನು ಇಲ್ಲಿ ಅನುಸರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭ ವಿವಿಧ ದೇಶಗಳಲ್ಲಿ ಆಗಿರುವ ತೀವ್ರ ಇಂಧನ ಬೆಲೆ ಏರಿಕೆಯ ಅಂಕಿ-ಅಂಶಗಳನ್ನೂ ರಿಜಿಜು ಅವರು ಹಂಚಿಕೊಂಡಿದ್ದಾರೆ. ಇದರಂತೆ, ಮಲೇಷ್ಯಾದಲ್ಲಿ ಪೆಟ್ರೋಲ್ ದರ ಸುಮಾರು ಶೇ.89.7 ಮತ್ತು ಡೀಸೆಲ್ ಶೇ.112.7 ಏರಿಕೆಯಾಗಿದ್ದರೆ, ಅಮೆರಿಕದಲ್ಲಿ ಪೆಟ್ರೋಲ್ ಶೇ.44 ಹಾಗೂ ಡೀಸೆಲ್ ಶೇ.48.1ರಷ್ಟು ಹೆಚ್ಚಳ ಕಂಡಿದೆ. ಚೀನಾದಲ್ಲಿ ಪೆಟ್ರೋಲ್ ಶೇ.21.7 ಮತ್ತು ಡೀಸೆಲ್ ಶೇ.23.7 ಹೆಚ್ಚಿಸಲಾಗಿದೆ. ಅಲ್ಲದೆ ಪ್ರಮುಖ ತೈಲ ಉತ್ಪಾದಕ ದೇಶವಾದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲೂ ಶೇ.52.4 ಮತ್ತು ಶೇ.86.1ರಷ್ಟು ಏರಿಕೆಯಾಗಿರುವುದನ್ನು ಬೊಟ್ಟು ಮಾಡಿದ್ದಾರೆ.

ದೇಶದಲ್ಲಿನ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಈಗ ಪೆಟ್ರೋಲ್ ಹಾಗೂ ಡೀಸೆಲ್‌ಗೆ ರೂ.3ರಷ್ಟು ದರವನ್ನು ಹೆಚ್ಚಿಸಿದ್ದು, ಇದರಿಂದ ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.94.77 ರಿಂದ ರೂ.97.77 ಕ್ಕೆ ಹಾಗೂ ಡೀಸೆಲ್ ರೂ.87.67 ರಿಂದ ರೂ.90.67 ಕ್ಕೆ ಏರಿಕೆಯಾಗಿದೆ.

ಆದರೆ ವಿವಿಧ ರಾಜ್ಯಗಳಲ್ಲಿ ಆಯಾ ರಾಜ್ಯ ಸರಕಾರಗಳ ಮೌಲ್ಯರ್ವತ ತೆರಿಗೆಗಳ ಕಾರಣದಿಂದ ಈ ದರಗಳು ಬದಲಾಗುತ್ತವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರಾಜ್ಯ ತೆರಿಗೆಗಳು ಕಡಿಮೆಯಾಗಿರುವುದರಿಂದ ಪೆಟ್ರೋಲ್ , ಡೀಸೆಲ್ ಬೆಲೆಗಳು ಕಡಿಮೆಯಿದ್ದು, ಕಾಂಗ್ರೆಸ್ ಮತ್ತಿತರ ವಿಪಕ್ಷ ಆಡಳಿತ ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ ಇರುವುದರಿಂದ ಅಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಹೆಚ್ಚಿವೆ ಎಂಬುದೂ ಗಮನಾರ್ಹ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !