ವಿರೋಧ ಪಕ್ಷದವರದ್ದು ಜನವಿರೋಧಿ ಧೋರಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಚಿವ ಈಶ್ವರಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿರುವ ವಿರೋಧ ಪಕ್ಷದವರದ್ದು ಜನವಿರೋಧಿ ಧೋರಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಅಹೋರಾತ್ರಿ ಧರಣಿ ಮಾಡುವುದು ವಿಧಾನಸಭೆಯಲ್ಲಿ ಹಲವಾರು ಬಾರಿ ಆಗಿದೆ. ಆದರೆ ಅದು ಜನಪರ ವಿಚಾರ, ರೈತರ, ರಾಜ್ಯದ ಹಿತದೃಷ್ಟಿಯಿಂದ ಅಗುತ್ತಿದ್ದವು. ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ಅವರು ಹೇಳುವ ಯಾವುದೇ ಕಾನೂನು ವಿರೋಧಿ ಅಂಶಗಳಿಲ್ಲ. ಯಾವುದೇ ವಿಷಯ ವಿರೋಧ ಪಕ್ಷದವರಿಗೆ ಇಲ್ಲದ್ದರಿಂದ ಇದನ್ನು ತೆಗೆದಿದ್ದಾರೆ. ವಿನಾಕಾರಣ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಒಂದು ಜವಾಬ್ದಾರಿಯುತ ವಿರೋಧ ಪಕ್ಷದವರು ಮಾಡುವಂಥದ್ದಲ್ಲ. ವಿರೋಧಪಕ್ಷ ತನ್ನ ಜವಾಬ್ದಾರಿಯನ್ನು ಸಂಪೂರ್ಣ ಮರೆತಿದೆ. ಇದರಲ್ಲಿ ಏನೂ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಖಂಡಿತವಾಗಿ ರಾಜಕೀಯವಾಗಿಯಾಗಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಅವರಿಗೆ ಲಾಭವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಕ್ಕಳಲ್ಲಿ ಗೊಂದಲ ಸೃಷ್ಟಿಯಾಗಬಾರದು:
ನಾವೆಲ್ಲರೂ ಸೇರಿ ಮಕ್ಕಳು ವಿದ್ಯಾರ್ಜನೆ ಮಾಡಬೇಕು ಎಂದು ರಾಜ್ಯದ ಜನತೆ, ಸಮಾಜ, ಸರಕಾರ ಅವರವರ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಶಾಂತಿ ಮೂಡಬೇಕು. ಮೊದಲಿನಂತೆಯೇ ವಿದ್ಯಾರ್ಜನೆಯಾಗಬೇಕು. ಮಾರ್ಚ್‍ನಲ್ಲಿ ಪರೀಕ್ಷೆಗಳು ನಡೆಯಲಿದ್ದು, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು. ಮಕ್ಕಳಲ್ಲಿ ಯಾವುದೇ ಗೊಂದಲಗಳು ಸೃಷ್ಟಿಯಾಗಬಾರದು ಎಂದು ನಾವೆಲ್ಲರೂ ಸೇರಿ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ಸಹಕಾರಿಯಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಸೇರಿ ವಿಧಾನಸಭೆಯ ಮೂಲಕ ಒಂದು ಸಂದೇಶವನ್ನು ಕಳುಹಿಸಬಹುದಾಗಿತ್ತು. ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದರ ಆದೇಶವನ್ನು ಪಾಲಿಸಬೇಕಾಗಿದೆ. ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ನಮ್ಮ ಜವಾಬ್ದಾರಿ ಶಾಂತಿ ನೆಲೆಸುವ ರೀತಿಯಲ್ಲಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಸದನದಲ್ಲಿ ಒಟ್ಟಾಗಿ ಆ ಸಂದೇಶವನ್ನು ಕಳಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ತಳಮಟ್ಟಕ್ಕೆ ಇಳಿದಿದೆ:
ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗದಂಥ ಹೇಳಿಕೆಯ ಹಿನ್ನೆಲೆಯಲ್ಲಿ ಈಶ್ವರಪ್ಪನವರು ಮಾಡದಿರುವ ತಪ್ಪಿಗೆ ಇಲ್ಲಿ ಧರಣಿ ಮಾಡುವುದು ನಿಜವಾಗಿಯೂ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಬಹಳ ತಳಮಟ್ಟಕ್ಕೆ ಹೋಗಿದೆ. ಇದೊಂದು ಒಳ್ಳೆಯ ಉದಾಹರಣೆ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಚಿಂತನೆಯಾಗಬೇಕು. ಸಾರ್ವಜನಿಕರೂ ಇದನ್ನು ಒಪ್ಪುವುದಿಲ್ಲ. ನಮ್ಮ ಸಮಸ್ಯೆಗಳನ್ನು ಚರ್ಚೆ ಮಾಡುತ್ತಾರೆ ಎಂದು ಸಾರ್ವಜನಿಕರು ಎದುರು ನೋಡುತ್ತಿರುತ್ತಾರೆ ಎಂದರು.

ರಾಜ್ಯದ ಹಿತಾಸಕ್ತಿಯ ಬಲಿ: ಎಲ್ಲವನ್ನು ಬಿಟ್ಟು ಧರಣಿ ಮಾಡಿ ಕಲಾಪ ನಡೆಯದಂತೆ ಮಾಡುವುದು ಸಮರ್ಥನೀಯ ಅಲ್ಲ. ಜನರೂ ಇದನ್ನು ಒಪ್ಪುವುದಿಲ್ಲ, ವಿರೋಧಿಸುತ್ತಾರೆ. ಜನರು ಹಾಗೂ ಮಾಧ್ಯಮದವರು ಸರಿಯಾದ ರೀತಿಯಲ್ಲಿ ಇದನ್ನು ವ್ಯಾಖ್ಯಾನ ಮಾಡಿದರೆ ಖಂಡಿತವಾಗಿಯೂ ತಮ್ಮ ಧರಣಿಯನ್ನು ಹಿಂಪಡೆಯಲು ಅನಿವಾರ್ಯತೆ ಬರಬಹುದು. ರಾಜಕಾರಣವೇ ಅವರಿಗೆ ಮುಖ್ಯವಾಗಿರುವುದರಿಂದ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ತಾರ್ಕಿಕ ಅಂತ್ಯವೆಂಬುದಿಲ್ಲ:
ಸಭಾಧ್ಯಕ್ಷರೊಂದಿಗೆ ಎರಡು ಸಭೆಗಳಾಗಿ ಇದನ್ನು ಬೆಳೆಸುವುದು ಬೇಡ ಎಂದು ತಿಳಿಸಲಾಗಿದೆ. ಅವರು ಇದನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. ಇದಕ್ಕೆ ಯಾವುದೇ ತಾರ್ಕಿಕ ಅಂತ್ಯವೆಂಬುದಿಲ್ಲ ಎಂದು ತಿಳಿಸಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!