ಚಂದ್ರಯಾನ-3ರ ವಿಕ್ರಮ್​ ಲ್ಯಾಂಡರ್ ನ ಚಿತ್ರ ಸೆರೆಹಿಡಿದ ಚಂದ್ರಯಾನ-2ರ ಆರ್ಬಿಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಂದ್ರನ ದಕ್ಷಿಣ ಧ್ರುವದ ಮೇಲೆ ಇರುವ ಚಂದ್ರಯಾನ-3ರ ವಿಕ್ರಮ್​ ಲ್ಯಾಂಡರ್ ​ ಅನ್ನು ಚಂದ್ರಯಾನ-2ರ ಆರ್ಬಿಟರ್​ ಸೆರೆಹಿಡಿದಿದೆ.

ಈ ಚಿತ್ರವನ್ನು ಹಂಚಿಕೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) , ಸೆಪ್ಟೆಂಬರ್ 6ರಂದು ಚಂದ್ರಯಾನ-2 ಆರ್ಬಿಟರ್‌ನಲ್ಲಿ ಡ್ಯುಯಲ್-ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ (Dual-frequency Synthetic Aperture Radar – DFSAR) ಉಪಕರಣದಿಂದ ಚಂದ್ರಯಾನ-3 ಲ್ಯಾಂಡರ್​​ನ ಚಿತ್ರವನ್ನು ಸೆರೆಹಿಡಿದಿದೆ ಎಂದು ಇಪೋಸ್ಟ್​ ಮಾಡಿದೆ.

ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಕರಣವು ನಿರ್ದಿಷ್ಟ ತರಂಗಾಂತರ ಬ್ಯಾಂಡ್‌ನಲ್ಲಿ ಸೂಕ್ಷ್ಮ ತರಂಗಗಳನ್ನು ರವಾನಿಸುತ್ತದೆ. ಮೇಲ್ಮೈಯಿಂದ ಚದುರಿದ ಅದೇ ತರಂಗಗಳನ್ನು ಸ್ವೀಕರಿಸುತ್ತದೆ. ಇದೊಂದು ರಾಡಾರ್ ಆಗಿರುವುದರಿಂದ ಸೌರ ಪ್ರಕಾಶವಿಲ್ಲದೆಯೂ ಚಿತ್ರಿಸುತ್ತಿದೆ. ಇದು ಗುರಿಯ ವೈಶಿಷ್ಟ್ಯಗಳ ದೂರ ಮತ್ತು ಭೌತಿಕ ಗುಣಲಕ್ಷಣಗಳನ್ನು ಒದಗಿಸುತ್ತದೆ. ಈ ಸಿಂಥೆಟಿಕ್ ಅಪರ್ಚರ್ ರಾಡಾರ್​ ಅನ್ನು ಭೂಮಿ ಮತ್ತು ಇತರ ಆಕಾಶಕಾಯಗಳ ರಿಮೋಟ್ ಸೆನ್ಸಿಂಗ್​ಗಾಗಿ ಬಳಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಡಿಎಫ್​ಎಸ್​ಎಆರ್​ ಚಂದ್ರಯಾನ-2 ಆರ್ಬಿಟರ್‌ನಲ್ಲಿರುವ ಪ್ರಮುಖ ವೈಜ್ಞಾನಿಕ ಸಾಧನವಾಗಿದೆ. ಇದು ಎಲ್​ ಮತ್ತು ಎಸ್​ ಬ್ಯಾಂಡ್‌ಗಳಲ್ಲಿ ಸೂಕ್ಷ್ಮ ತರಂಗಗಳನ್ನು ಬಳಸಿಕೊಳ್ಳುತ್ತದೆ. ಈ ಅತ್ಯಾಧುನಿಕ ಉಪಕರಣವು ಪ್ರಸ್ತುತ ಯಾವುದೇ ಗ್ರಹಗಳ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ರೆಸಲ್ಯೂಶನ್ ಪೋಲಾರಿಮೆಟ್ರಿಕ್ ಚಿತ್ರಗಳನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದೆ.

ರಾಡಾರ್ ತರಂಗಾಂತರವು ಡಿಎಫ್​ಎಸ್​ಎಆರ್​ಅನ್ನು ಕೆಲವು ಮೀಟರ್‌ಗಳವರೆಗೆ ಚಂದ್ರನ ಉಪಮೇಲ್ಮೈ ವೈಶಿಷ್ಟ್ಯಗಳನ್ನು ಅನ್ವೇಷಿಸಲು ಶಕ್ತಗೊಳಿಸುತ್ತದೆ. ಡಿಎಫ್​ಎಸ್​ಎಆರ್​ ಕಳೆದ ನಾಲ್ಕು ವರ್ಷಗಳಿಂದ ಚಂದ್ರನ ಧ್ರುವ ವಿಜ್ಞಾನದ ಮೇಲೆ ಮುಖ್ಯವಾದ ಗಮನಹರಿಸುತ್ತಿದೆ. ಜೊತೆಗೆ ಚಂದ್ರನ ಮೇಲ್ಮೈಯನ್ನು ಚಿತ್ರಿಸುವ ಮೂಲಕ ಉತ್ತಮ ಗುಣಮಟ್ಟದ ದತ್ತಾಂಶವನ್ನು ಒದಗಿಸುತ್ತದೆ ಎಂದು ಇಸ್ರೋ ವಿವರಿಸಿದೆ.

ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿತ್ತು. ಇದಾದ 41 ದಿನಗಳ ನಂತರ ಎಂದರೆ, ಆಗಸ್ಟ್​ ​23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದೆ. ಲ್ಯಾಂಡರ್​ನಲ್ಲಿದ್ದ ಪ್ರಜ್ಞಾನ್ ರೋವರ್ ಹೊರಬಂದು​ ವೈಜ್ಞಾನಿಕ ಅಧ್ಯಯನಗಳನ್ನು​ ನಡೆಸಿದೆ. ಚಂದ್ರನ ಮೇಲೆ ರಾತ್ರಿಯಾದ ಕಾರಣ ಸೆಪ್ಟೆಂಬರ್ 3ರಂದು ರೋವರ್​ಗೆ ವಿಶ್ರಾಂತಿ ನೀಡಲಾಗಿದೆ.

ಇತ್ತ ಚಂದ್ರಯಾನ-2ರ ಬಾಹ್ಯಾಕಾಶ ನೌಕೆಯನ್ನು 2019ರ ಜುಲೈ 22ರಂದು ಉಡಾವಣೆ ಮಾಡಲಾಗಿತ್ತು. ಅದೇ ವರ್ಷ ಸೆಪ್ಟೆಂಬರ್ 02ರಂದು ಚಂದ್ರನ ಮೇಲೆ ಇಳಿಸುವ ಸಲುವಾಗಿ ಆರ್ಬಿಟರ್‌ನಿಂದ ಲ್ಯಾಂಡರ್​ಅನ್ನು ಬೇರ್ಪಡಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಅದು ಸಂಪರ್ಕವನ್ನು ಕಡೆದುಕೊಂಡಿತ್ತು. ಮತ್ತೊಂದೆಡೆ, ಚಂದ್ರನ ಸುತ್ತ ತನ್ನ ಉದ್ದೇಶಿತ ಕಕ್ಷೆಯಲ್ಲಿ ಇರಿಸಲಾಗಿರುವ ಆರ್ಬಿಟರ್ ಇನ್ನೂ ಕಾರ್ಯ ನಿರ್ವಹಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!