ಹೊಸದಿಗಂತ ಬೀದರ್:
ವಕ್ಫ್ ವಿಚಾರವನ್ನ ಹಲವು ದಿನಗಳಿಂದ ನೋಡಿದ್ದೀರ, ಈಗ ಯಾವುದೇ ಚುನಾವಣೆ ಕೂಡ ಇಲ್ಲ, ಯಾರನ್ನೂ ಗೆಲ್ಲಿಸಬೇಕಿಲ್ಲ. ನಮ್ಮ ತಂದೆ ಬಂಗಾರಪ್ಪ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಅನೇಕರು ಉಳುವವನೇ ಭೂ ಒಡೆಯ ವಿಚಾರವಾಗಿ ಹೋರಾಟ ಮಾಡಿದ್ರು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕರು ಭೂಮಿ ಕಳೆದುಕೊಂಡರು ನಿಜ. ಮುಸ್ಲೀಮರು, ಜೈನರು, ಬೌದ್ಧರ ದೇವಸ್ಥಾನಕ್ಕೆ ಜಾಗ ನೀಡಲಾಗಿತ್ತು. ಈ ಭಾಗದಲ್ಲಿ ನಿಜಾಮರ ಕಾಲದಲ್ಲಿ ದೇವಸ್ಥಾನ, ಖಬರಸ್ತಾನ, ಸ್ಮಶಾನ ಅಂತೆಲ್ಲಾ ಸುಚಿಸಲಾಗಿತ್ತು. ಆದ್ರೆ ಇಂದು ಅದೇ ದೊಡ್ಡ ಪಿಡುಗಾಗಿದೆ. ನನ್ನನ್ನ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ರು. ಆಗ ವಕ್ಫ್ ಜಾಗದ ಪ್ರತಿಯೊಂದು ಫೈಲನ್ನ ನೋಡಿದ್ದೇನೆ.
ಬೆಂಗಳೂರಿನಲ್ಲಿ ವಿಂಡ್ಸರ್ ಮ್ಯಾನರ್ ಅನ್ನೋ ಹೋಟೆಲ್ ಇದೆ. ಅದು ಸಾವಿರಾರು ಕೋಟಿ ಲಾಭ ಮಾಡ್ತಿದೆ. ಆದ್ರೆ ಅದು ಸರ್ಕಾರಕ್ಕೆ ವಾರ್ಷಿಕವಾಗಿ ಕಟ್ಟೋದು ಬರೀ ಹತ್ತು ಸಾವಿರ ಮಾತ್ರ. ಸಾವಿರಾರು ಎಕರೆಯಲ್ಲಿ ನೂರಾರು ಎಕರೆ ನುಂಗಿ ನೀರು ಕುಡಿದಿದ್ದಾರೆ. ಜಾಫರ್ ಶರೀಫ್, ಹ್ಯಾರೀಸ್, ಧರ್ಮಸಿಂಗ್, ಖರ್ಗೆ ಸೇರಿದಂತೆ ಅನೇಕರು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಇಲ್ಲಿ 960 ಎಕರೆ ಜಮೀನು ವಕ್ಫ್ ಆಗಿದೆ, ಅದನ್ನ ವಾಪಸ್ ಅದೇ ಕುಟುಂಬಕ್ಕೆ ಕೊಡಿಸಲು ನಾವು ಬಂದಿದ್ದೇವೆ.
ಸಚಿವ ಜಮೀರ್ ಅಹ್ಮದ್ ಖಾನ್ ಇದನ್ನ ಬಿಸಿನೆಸ್ ಮಾಡಿಕೊಳ್ಳಲು ಬಂದಿರಬಹುದು, ಗೊತ್ತಿಲ್ಲ. ಇಂದು 30ಲಕ್ಷ ಎಕರೆ ವಕ್ಫ್ ಅಂತ ನಮೂದಾಗಿದೆ. ಇದನ್ನ ಸರಿಪಡಿಸುವ ಕೆಲಸ ಪ್ರಧಾನಿ ಅವರಿಂದ ಮಾತ್ರ ಸಾಧ್ಯ. ಬೆಂಗಳೂರಿನಲ್ಲಿ 160 ಎಕರೆ ವಕ್ಫ್ ಆಸ್ತಿ ಇದೆ. ಅದರಲ್ಲಿ 135 ಎಕರೆ ಜಮೀನು ನುಂಗಿಹಾಕಿದ್ದಾರೆ. ಇನ್ನು 20-25 ಎಕರೆ ಜಾಗ ಮಾತ್ರ ಉಳಿದಿದೆ. ಅದಕ್ಕೆ ಬೇಲಿ ಹಾಕೋ ಕೆಲಸ ಮಾಡದೆ, ದಂಧೆಗೆ ಇಳಿದಿದ್ದಾರೆ. ನಮ್ಮ ತಂದೆ ಅನೇಕ ಕೆಲಸ ಮಾಡಿದ್ದಾರೆ, ಕೃಪಾಂಕ ನೀಡಿದ್ದಾರೆ. ಆದ್ರೆ ಈಗಿನ ಸರ್ಕಾರದ ಗ್ಯಾರಂಟಿ ತರ ಬರ್ಬಾದ್ ಮಾಡುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.
ವಕ್ಫ್ ಕಾಯ್ದೆ ತೆಗೆಯುವವರೆಗೂ ಹೋರಾಟ ಮಾಡೋಣ. ವಕ್ಫ್ ಹಟಾವೋ, ದೇಶ್ ಬಚಾವೋ ಕಾರ್ಯಕ್ರಮ ಕೈಗೊಂಡಿದ್ದೇವೆ ಎಂದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್, ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್, ಬಿಜೆಪಿ ಮುಖಂಡ ಭರತ್ ಸೇರಿದಂತೆ ಗ್ರಾಮದ ಮುಖಂಡರು ಭಾಗಿಯಾಗಿದ್ದರು.