ನಮ್ಮ ಮಿಷನ್​ ಯಶಸ್ವಿಯಾಗಿ ಮುಗಿಯಿತು: ಆಪರೇಶನ್ ಕಾವೇರಿಯಡಿ ಸುಡಾನ್​ನಿಂದ 3,862 ಭಾರತೀಯರ ಸ್ಥಳಾಂತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಡಾನ್​ನಿಂದ ಭಾರತೀಯರನ್ನು ರಕ್ಷಿಸಿ ವಾಪಸ್​ ಕರೆತರುವ ಕಾರ್ಯಾಚರಣೆ ‘ಆಪರೇಶನ್ ಕಾವೇರಿ’ (Operation Kaveri) ಮುಕ್ತಾಯಗೊಂಡಿದೆ.

ಈ ಆಪರೇಶನ್ ಕಾವೇರಿ ಕಾರ್ಯಾಚರಣೆಯಡಿ ಸುಮಾರು 3,862 ಭಾರತೀಯರನ್ನು ಸುಡಾನ್​ನಿಂದ ಸ್ಥಳಾಂತರ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ (Central Government) ತಿಳಿಸಿದೆ.

ಸುಡಾನ್​ನಲ್ಲಿ ಇದ್ದ ಭಾರತೀಯರು ಎಲ್ಲರೂ ವಾಪಸ್ ಬರಲಿಲ್ಲ. ಯಾರೆಲ್ಲ ವಾಪಸ್ ಬರುವ ಇಚ್ಛೆ ವ್ಯಕ್ತಪಡಿಸಿದ್ದಿರೋ, ಅವರನ್ನು ಯಾರನ್ನೂ ಅಲ್ಲಿ ಬಿಟ್ಟಿಲ್ಲ ಎಂದು ಹೇಳಿದೆ. ಹಾಗೇ, ಆಪರೇಶನ್ ಕಾವೇರಿಯಲ್ಲಿ ನಿರಂತರವಾಗಿ ಪಾಲ್ಗೊಂಡ ಭಾರತೀಯ ವಾಯುಪಡೆ ವಿಮಾನಗಳ ಸಿಬ್ಬಂದಿ, ನೌಕಾಪಡೆ ಹಡಗುಗಳ ಸಿಬ್ಬಂದಿ, ಮತ್ತಿತರ ಅಧಿಕಾರಿಗಳಿಗೆಲ್ಲರಿಗೂ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್​.ಜೈಶಂಕರ್ ಧನ್ಯವಾದ ಸಲ್ಲಿಸಿದ್ದಾರೆ. ‘ನಮ್ಮ ಮಿಷನ್​ ಯಶಸ್ವಿಯಾಗಿ ಮುಗಿಯಿತು’ ಎಂದಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಎಸ್.ಜೈಶಂಕರ್​ ‘ಇಂದು ಮುಂಜಾನೆ 47 ಭಾರತೀಯರನ್ನು ಒಳಗೊಂಡ, ಭಾರತೀಯ ವಾಯುಪಡೆಯ ಸಿ 130 ಜೆ ವಿಮಾನ ಜೆಡ್ಡಾದಿಂದ ಭಾರತವನ್ನು ತಲುಪಿತು. ಇಲ್ಲಿಗೆ ಆಪರೇಶನ್ ಕಾವೇರಿ ಮುಕ್ತಾಯವಾಯಿತು. ಈ ಕಾರ್ಯಾಚರಣೆಯಡಿ ಒಟ್ಟು 3862 ಭಾರತೀಯರನ್ನು ಸುಡಾನ್​ನಿಂದ ಸ್ಥಳಾಂತರ ಮಾಡಿದ್ದೇವೆ’ ಎಂದು ಹೇಳಿದ್ದಾರೆ.
ಸುಡಾನ್​ನಲ್ಲಿ ಭದ್ರತಾ ವ್ಯವಸ್ಥೆ ತೀವ್ರ ಹದಗೆಟ್ಟಿತ್ತು.ಆ ದೇಶದ ವಿವಿಧ ಭಾಗಗಳಲ್ಲಿ ಇದ್ದ ಭಾರತೀಯರನ್ನು ಪೋರ್ಟ್​ ಸುಡಾನ್​ಗೆ ಕರೆತರುವುದೇ ಸವಾಲು ಆಗಿತ್ತು. ಆದರೆ ವಿದೇಶಗಳಲ್ಲಿ ಇರುವ ಭಾರತೀಯರ ಸುರಕ್ಷತೆ, ಭದ್ರತೆ ಬಗ್ಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇಟ್ಟುಕೊಂಡಿರುವ ಬದ್ಧತೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದು ಜೈಶಂಕರ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಭಾರತೀಯ ವಾಯುಪಡೆಯ 17 ವಿಮಾನಗಳು ಮತ್ತು ನೌಕಾಪಡೆಯ 5 ನೌಕೆಗಳ ಮೂಲಕ ಭಾರತೀಯರನ್ನು ಪೋರ್ಟ್ ಸುಡಾನ್​ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಕರೆತಂದು, ಅಲ್ಲಿಂದ ಭಾರತಕ್ಕೆ ವಾಯುಪಡೆಯ ವಿಮಾನಗಳು ಮತ್ತು ಇತರ ವಾಣಿಜ್ಯ ಬಳಕೆ ವಿಮಾನಗಳ ಮೂಲಕ ಕರೆತರಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಮತ್ತು ಸುಡಾನ್​​ನಲ್ಲಿರುವ ಭಾರತೀಯರನ್ನು ರಕ್ಷಿಸಲು ಸಂಪೂರ್ಣವಾಗಿ ಸಹಕರಿಸಿದ ಸೌದಿ ಅರೇಬಿಯಾಕ್ಕೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ. ಚಾಡ್, ಈಜಿಪ್ಟ್, ಫ್ರಾನ್ಸ್, ದಕ್ಷಿಣ ಸುಡಾನ್, ಯುಎಇ, ಯುಕೆ, ಯುಎಸ್‌ಎ ಮತ್ತು ಯುಎನ್​ಗಳು ನಮಗೆ ನೀಡಿದ ಸಹಕಾರವನ್ನೂ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!