May 28, 2026
Thursday, May 28, 2026
spot_img

ನಮ್ದು ಕೇವಲ ಇಂಟಿಮೇಷನ್ ಕೆಲಸ ಅಷ್ಟೇ: ವಿನಯ್ ಕುಲಕರ್ಣಿ ಸದಸ್ಯತ್ವ ವಿವಾದಕ್ಕೆ ಸ್ಪೀಕರ್ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದ ಬೆನ್ನಲ್ಲೇ, ಅವರ ಶಾಸಕ ಸ್ಥಾನದ ಅನರ್ಹತೆಯ ಬಗ್ಗೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಈ ಕುರಿತು ವಿಧಾನಸೌಧದಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯು.ಟಿ. ಖಾದರ್ ಅವರು ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ ಸ್ಪೀಕರ್ ಅಧಿಕಾರ ಎಷ್ಟಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಶಾಸಕರೊಬ್ಬರ ಸದಸ್ಯತ್ವವನ್ನು ರದ್ದು ಮಾಡುವ ನೇರ ಅಧಿಕಾರ ಸ್ಪೀಕರ್‌ಗೆ ಇಲ್ಲ ಎಂದು ಖಾದರ್ ತಿಳಿಸಿದ್ದಾರೆ. “ಯಾವುದಾದರೂ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದಾಗ, ನಿಯಮದ ಪ್ರಕಾರ ಆ ಸದಸ್ಯತ್ವವು ತನ್ನಿಂದ ತಾನೇ ರದ್ದಾಗುತ್ತದೆ. ಇಲ್ಲಿ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಕೇವಲ ಆ ಬಗ್ಗೆ ಅಧಿಕೃತ ಮಾಹಿತಿ ಅಥವಾ ಇಂಟಿಮೇಷನ್ ನೀಡುವ ಕೆಲಸವನ್ನಷ್ಟೇ ಮಾಡುತ್ತೇವೆ” ಎಂದು ಅವರು ವಿವರಿಸಿದರು.

ಈ ವಿಚಾರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಎಂಬ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, “ಕಾನೂನು ಎಲ್ಲರಿಗೂ ಒಂದೇ. ಕೋರ್ಟ್ ಆದೇಶ ಬಂದ ಕ್ಷಣದಿಂದಲೇ ಅವರ ಸ್ಥಾನ ರದ್ದಾದಂತೆ ಲೆಕ್ಕ. ಒಂದು ವೇಳೆ ಅವರು ಮೇಲ್ಮನವಿ ಸಲ್ಲಿಸಿ ಕೋರ್ಟ್‌ನಿಂದ ತಡೆಯಾಜ್ಞೆ ತಂದರೆ ಮಾತ್ರ ಅವರ ಸದಸ್ಯತ್ವ ಮತ್ತೆ ಮರುಸ್ಥಾಪನೆಯಾಗುತ್ತದೆ. ಅಲ್ಲಿಯವರೆಗೆ ಅವರು ಸಭೆಗಳಲ್ಲಿ ಭಾಗವಹಿಸಲು ಅಥವಾ ಸದನದಲ್ಲಿ ಕೂರಲು ಸಾಧ್ಯವಿಲ್ಲ” ಎಂದರು.

ಬಸವರಾಜ ಕೊರವರ ಅವರು ಸಲ್ಲಿಸಿದ ಮನವಿಯ ಕುರಿತು ಮಾತನಾಡಿದ ಸ್ಪೀಕರ್, ಈ ಬಗ್ಗೆ ಪರಿಶೀಲನೆ ನಡೆಸಲು ವಿಧಾನಸಭೆಯ ಕಾರ್ಯದರ್ಶಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ತಿಳಿಸಿದರು. “ಮಾಹಿತಿ ಇಲ್ಲದವರಿಗೆ ನಾನು ಮಾಹಿತಿ ನೀಡುತ್ತಿದ್ದೇನೆ, ಇಲ್ಲಿ ವಿಳಂಬ ಮಾಡುವ ಉದ್ದೇಶ ನಮಗಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನಾಗಬೇಕೋ ಅದು ತನ್ನಷ್ಟಕ್ಕೆ ತಾನೇ ನಡೆಯುತ್ತದೆ” ಎಂದು ಖಾದರ್ ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !