ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ವಿರುದ್ಧ ತಗಾದೆ ತೆಗೆದಿದ್ದ ಮಾಲ್ಡೀವ್ಸ್ಗೆ ಒಂದರ ಮೇಲೊಂದು ಹೊಡೆತ ಬೀಳುತ್ತಿದ್ದು, ಈಗಾಗಲೇ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಇಷ್ಟಾದರೂ, ಚೀನಾ ಯೋಜನೆ, ದುಡ್ಡಿನ ಮುಲಾಜಿನಿಂದಾಗಿ ಮಾಲ್ಡೀವ್ಸ್ನಲ್ಲಿರುವ ಭಾರತದ ಸೈನಿಕರನ್ನು ವಾಪಸ್ ಕಳುಹಿಸಲಾಗಿದೆ.
ಇದೀಗ ಭಾರತವು ಮಾಲ್ಡೀವ್ಸ್ಗೆ ನೀಡಿರುವ ಮೂರು ಯುದ್ಧವಿಮಾನಗಳನ್ನು ನಿರ್ವಹಿಸುವ ಪೈಲಟ್ಗಳೇ ನಮ್ಮಲ್ಲಿಲ್ಲ ಎಂಬುದಾಗಿ ಮಾಲ್ಡೀವ್ಸ್ ತಿಳಿಸಿದೆ. ಇದು ಮಾಲ್ಡೀವ್ಸ್ (Maldives) ಸೇನೆಯ ಅದಕ್ಷತೆಗೆ ನಿದರ್ಶನ.
ಮಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ಘಸ್ಸನ್ ಮೌಮೂನ್, ಭಾರತ ನೀಡಿದ ಮೂರು ವಿಮಾನಗಳನ್ನು ಹಾರಿಸುವ ಕೌಶಲವು ನಮ್ಮ ಪೈಲಟ್ಗಳಿಗೆ ಇಲ್ಲ. ಅಂತಹ ಪರವಾನಗಿ ಹೊಂದಿರುವ ಪೈಲಟ್ಗಳು ಮಾಲ್ಡೀವ್ಸ್ ಸೇನೆಯಲ್ಲಿ ಇಲ್ಲಎಂದು ಹೇಳಿದ್ದಾರೆ.
ಇದುವರೆಗೆ ಮಾಲ್ಡೀವ್ಸ್ನಲ್ಲಿದ್ದ ಭಾರತದ ಯೋಧರು ವಿಮಾನಗಳನ್ನು ನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಯೋಧರು ಭಾರತಕ್ಕೆ ವಾಪಸಾಗಿದ್ದಾರೆ. ಭಾರತವು ಅವುಗಳನ್ನು ದೇಣಿಗೆ ನೀಡಿದ ಕಾರಣ ಯುದ್ಧವಿಮಾನಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ. ಆದರೆ, ಇವುಗಳನ್ನು ನಿಭಾಯಿಸುವ ಕೌಶಲವೂ ಮಾಲ್ಡೀವ್ಸ್ ವಾಯುಪಡೆ ಪೈಲಟ್ಗಳಿಗೆ ಇಲ್ಲ ಎಂಬುದು ಬಯಲಾಗಿದೆ.
ಮಾಲ್ಡೀವ್ಸ್ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಬಾಯ್ಕಾಟ್ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ.