ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಿಜೆಪಿ ಧರ್ಮ ಮತ್ತು ಭಾವನೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಆದರೆ ನಮ್ಮದು ಹೊಟ್ಟೆಪಾಡಿನ ರಾಜಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಭಾನುವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಜನರು ಕಷ್ಟದಲ್ಲಿದ್ದಾಗ, ರಾಜ್ಯಕ್ಕೆ ಕಳಂಕ ಬರುವ ಆರೋಪಗಳು ಬಂದಾಗ ನಿವಾರಣೆ ಮಾಡಲು ಮೋದಿ ಬರಲಿಲ್ಲ.ರಾಜ್ಯದಲ್ಲಿ ನಿರಂತರ ಮಳೆ ಸುರಿದು, ಅಪಾರ ಹಾನಿಯಾದಾಗ ರಾಜ್ಯಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ, 25 ಜನ ಸಂಸದರನ್ನು, ಕರೆಸಿ ಒಂದು ದಿನವು ಸಭೆಯನ್ನು ಮಾಡಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರುವುದಿಲ್ಲ ಎಂದು ಖಾತರಿಗೊಂಡಿರುವುದರಿಂದ ರಾಜ್ಯಕ್ಕೆ ಪುನರಪಿ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಲ್ಲಾ ವರದಿಗಳು ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದಿಲ್ಲ ಅಂತ ಹೇಳಿವೆ, ನಮ್ಮ ಪಕ್ಷದ, ಆಂತರಿಕ, ಮಾಧ್ಯಮ ವರದಿಗಳು ಹೇಳಿವೆ. ಹೀಗಾಗಿ 65 ಸ್ಥಾನಕ್ಕಿಂತ ಹೆಚ್ಚು ಬಿಜೆಪಿ ಬರೋದಿಲ್ಲ. ಇದನ್ನು ಏನಾದರೂ ಪ್ಯಾಚ್ ಅಪ್ ಮಾಡೋದಕ್ಕೆ ಆಗುತ್ತದೆಯಾ ಎಂದು ನೋಡಲು ಬರುತ್ತಿದ್ದಾರೆ ಎಂದರು.
ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಮೊದಲು ಅಮಿತ್ ಶಾ ಘೋಷಿಸಿದ್ದರು, ಈಗ ಬೊಮ್ಮಾಯಿ ಕೈ ಬಿಟ್ಟು ಮೋದಿ ಅವರ ಮುಖ ತೋರಿಸಲು ಹೊರಟಿದ್ದಾರೆ. ನಮ್ಮ ಕರ್ನಾಟಕಕ್ಕೆ ಮೋದಿ ಅವರ ಮುಖ ಯಾಕೆ ಬೇಕು, ಇಲ್ಲಿ ಆಡಳಿತ ಮಾಡುವವರ ಮುಖ ಮುಂದಿಟ್ಟು ಚುನಾವಣೆ ಎದುರಿಸಿ ಎಂದರು.
ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ, ಇನ್ನು 60 ದಿನ ಈ ಸರ್ಕಾರ ಇರುತ್ತೆ ಅಷ್ಟೇ, ಬಿಜೆಪಿ ಸರ್ಕಾರದ ಕೊನೆಯ ದಿನಗಳು ಬಂದಿವೆ, ಕೌಂಟ್ ಡೌನ್ ಶುರುವಾಗಿದೆ. ಫೆಬ್ರವರಿ 28ಕ್ಕೆ ಇವರದು ಕ್ಲೋಸ್ ಆಗುತ್ತದೆ. ಬಳಿಕ ಚುನಾವಣಾ ನೀತಿ ಸಂಹಿತೆ ಬರುತ್ತದೆ, 40 ದಿನದಲ್ಲಿ ಇವರು ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ ಎಂದರು.
ಮದ್ದೂರಿನಿಂದ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು ಕೇಳಿದ್ದಾರೆ ನಿಜ, ಆದರೆ ನಾನು ಇಲ್ಲ ಅಂತ ಹೇಳಲ್ಲ. ಮಂಡ್ಯ ಮದ್ದೂರಿನವರು ಬಂದು ನನ್ನ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಸದ್ಯ ನಾನು ಚರ್ಚೆಗೆ ಅವಕಾಶ ನೀಡಲ್ಲ ಎಂದರು.
ಮಗಳು ಅಥವಾ ಅಳಿಯನ ಸ್ಪರ್ಧೆ ಬಗ್ಗೆ ಮಾತನಾಡಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರ ಟಾರ್ಗೆಟ್ ಹಳೆ ಮೈಸೂರಿನ ಕುರಿತಾಗಿ ಪ್ರತಿಕ್ರಿಯಿಸಿ
ಮೊದಲು ಟಾರ್ಗೆಟ್ ಕನಕಪುರ ಮಾಡಲಿ ಎಂದು ತಾಕೀತು ಮಾಡಿದರು.