ಮಗನ ಹಿಂದಿಕ್ಕಿ ಟಾಪರ್​ ಆದ ಬೇರೊಬ್ಬ ವಿದ್ಯಾರ್ಥಿಗೆ ವಿಷ ಹಾಕಿ ಕೊಂದ ಸ್ವಾರ್ಥಿ ಮಹಿಳೆ !

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತರಗತಿಯಲ್ಲಿ ತನ್ನ ಮಗನನ್ನು ಹಿಂದಿಕ್ಕಿ ಟಾಪರ್​ ಆದ ಎಂಬ ಕಾರಣಕ್ಕಾಗಿ ಮಹಿಳೆಯೋರ್ವಳು 8ನೇ ತರಗತಿ ವಿದ್ಯಾರ್ಥಿಗೆ ವಿಷ ಹಾಕಿ ಕೊಂದಿರುವ ಆಘಾತಕಾರಿ ಘಟನೆ ಪುದುಚೇರಿಯ ಕಾರೈಕ್ಕಲ್​ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಹಂತಕಿ ಮಹಿಳೆಯನ್ನು ಬಂಧಿಸಲಾಗಿದೆ. ಕಾರೈಕ್ಕಲ್‌ನ ನೆಹರು ನಗರದ ಖಾಸಗಿ ಶಾಲೆಯಲ್ಲಿ 8ನೇ ತರಗತಿಯ ಬಾಲಮಣಿಕಂದನ್ ಮೃತ ವಿದ್ಯಾರ್ಥಿ. ವಿಕ್ಟೋರಿಯಾ ಸಹಾಯರಾಣಿ ವಿಷ ಕುಡಿಸಿ ಕೊಂದ ಪಾಪಿ ಮಹಿಳೆ.

8ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಮಣಿಕಂದನ್​ ಅಗ್ರಸ್ಥಾನ ಪಡೆದಿದ್ದ. ಆತನ ಸಹಪಾಠಿಗಿಂತಲೂ ಅಧಿಕ ಅಂಕಗಳನ್ನು ಗಳಿಸಿದ್ದ. ಇದು ಸಹಪಾಠಿಯ ತಾಯಿಯಲ್ಲಿ ಅಸೂಯೆ ಮೂಡಿಸಿತ್ತು. ತನ್ನ ಮಗನನ್ನು ಮೀರಿಸಿದ ಎಂಬ ಸಿಟ್ಟು ಅವಳಲ್ಲಿ ಮನೆ ಮಾಡಿತ್ತು.ಇದೇ ಕಾರಣಕ್ಕಾಗಿ ಹಂತಕಿ ವಿಕ್ಟೋರಿಯಾ ಸಹಾಯರಾಣಿ ಶಾಲೆಗೆ ಆಗಮಿಸಿ ಟಾಪರ್​ ಮಣಿಕಂದನ್​ಗೆ ವಿಷ ಹಾಕಿದ ತಂಪು ಪಾನೀಯ ಕುಡಿಸಿದ್ದಾರೆ. ಮನೆಗೆ ತಲುಪುವಷ್ಟರಲ್ಲಿ ಆ ಬಾಲಕ ನಿರಂತರವಾಗಿ ವಾಂತಿ ಮಾಡಿಕೊಂಡಿದ್ದಾನೆ. ಪೋಷಕರು ಭಯಗೊಂಡು ಕಾರಣ ಕೇಳಿದಾಗ ತನ್ನ ಸಹಪಾಠಿಯ ತಾಯಿ ತಂಪು ಪಾನೀಯ ನೀಡಿದ ಬಳಿಕ ಹೀಗಾಗಿದೆ ಎಂದು ಹೇಳಿದ್ದಾನೆ.

ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕನಿಗೆ ಪಾನೀಯದಲ್ಲಿ ವಿಷ ಬೆರೆಸಲಾಗಿದೆ ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ವಿಕ್ಟೋರಿಯಾ ಸಹಾಯರಾಣಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆಕೆ ತನ್ನ ಮಗನನ್ನು ಹಿಂದಿಕ್ಕಿ ಮಣಿಕಂದನ್​ ಟಾಪರ್​ ಆಗಿದ್ದಕ್ಕಾಗಿ ವಿಷ ಹಾಕಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಆಕೆಗೆ ನ್ಯಾಯಾಂಗ ಬಂಧನ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!