ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಚಿಕಿತ್ಸೆಯ ಎಲ್ಲಾ ಖರ್ಚು ವೆಚ್ಚ ಸರಕಾರ ಭರಿಸಲಿದೆ: ಸಚಿವ ಕೋಟ

ಹೊಸ ದಿಗಂತ ವರದಿ, ಮಂಗಳೂರು:

ಹಿರಿಯ ಜಾನಪದ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಮಾತನಾಡಿದ ಸಚಿವರು, ಸುಕ್ರಜ್ಜಿಯೆಂದೇ ಎಲ್ಲರಿಂದ ಪ್ರೀತಿಯಿಂದ ಕರೆಯಲ್ಪಡುವ ನಾಡೋಜ, ಸುಕ್ರಿ ಬೊಮ್ಮಗೌಡ ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತಿದೆ. ಅವರ ಆಸ್ಪತ್ರೆಯ ಎಲ್ಲಾ ಖರ್ಚುವೆಚ್ಚಗಳನ್ನು ಸರಕಾರವೇ ಭರಿಸಲಿದೆ. ಅವರ ಯೋಗಕ್ಷೇಮದ ಬಗ್ಗೆ ನಿಗಾ ಇಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕರೆ ಮಾಡಿ ಸುಕ್ರಜ್ಜಿಯವರ ಎಲ್ಲಾ ಖರ್ಚುವೆಚ್ಚ ಸರಕಾರ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಸುಕ್ರಿ ಬೊಮ್ಮಗೌಡ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡ ಸತೀಶ್ ಕುಂಪಲ, ಡಿಎಚ್‌ಒ ಡಾ.ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ನಾಲ್ಕು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸುಕ್ರಜ್ಜಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಉಸಿರಾಟ ಸಮಸ್ಯೆ ಕಾಡಿದ್ದರಿಂದ ಶನಿವಾರ ಮಂಗಳೂರಿಗೆ ಕರೆತಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಹೃದಯದ ಲಘು ಶಸ್ತ್ರ ಚಿಕಿತ್ಸೆ ನಡೆಸಿದ ಬಳಿಕ ನಾಲ್ಕು ಸ್ಟಂಟ್‌ಗಳನ್ನು ಅಳವಡಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here