ಪದ್ಮಶ್ರಿ ತುಳಸಜ್ಜಿಗೆ ಮೊಣಕಾಲು ನೀರು ದಾಟುವ ಸಂಕಟ!

ಹೊಸದಿಗಂತ ವರದಿ, ಅಂಕೋಲಾ:
ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡರಿಗೆ ಮಳೆಗಾಲದಲ್ಲಿ ಮೊಣಕಾಲಿನವರೆಗಿನ ನೀರನ್ನು ದಾಟಿ ಮನೆಗೆ ಓಡಾಡಬೇಕಾದ ದುಸ್ಥಿತಿ ಕಾಡಿದೆ !
ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಹೊನ್ನಳ್ಳಿಯಲ್ಲಿ ಇವರ ಮನೆಯಿದ್ದು, ಕಡು ಬಡತನದ ನಡುವೆಯೂ ಸಹಸ್ರಾರು ಗಿಡಗಳನ್ನು ನೆಟ್ಟು ಪೋಷಿಸಿ ತುಳಸಜ್ಜಿ ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇವರ ಸಾಮಾಜಿಕ ಸ್ಪಂದನ ಮತ್ತು ವೃಕ್ಷಪ್ರೇಮವನ್ನು ಗುರುತಿಸಿ ಕೇಂದ್ರ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರತಿ ಮಳೆಗಾಲದಲ್ಲೂ ಇವರ ಮನೆ ಎದುರಿನ ಪುಟ್ಟ ಹಳ್ಳ ತುಂಬಿ ಹರಿಯುತ್ತಿದ್ದು, ತುಳಸಜ್ಜಿ ಸಹಿತ ಪುಟ್ಟಪುಟ್ಟ ಮಕ್ಕಳು ಮೊಳಕಾಲಿನವರೆಗಿನ ನೀರನ್ನು ದಾಟಿ ಓಡಾಡಬೇಕು. ಇಲ್ಲೊಂದು ಚಿಕ್ಕ ಸಂಕ ಕಟ್ಟಿಸಿಕೊಡಿ ಎಂದು ತುಳಸಿ ಗೌಡ ಮಾಡಿರುವ ಮನವಿಗೆ ಲೆಕ್ಕವಿಲ್ಲ. ಆದರೂ ಸರ್ಕಾರದಿಂದ ಸ್ಪಂದನೆಯಿಲ್ಲ.
ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಈ ಹೊಳೆ ಮತ್ತೆ ಗರ್ಭ ತುಂಬಿಕೊಂಡಿದ್ದು, ನಡು ನೀರಲ್ಲಿ ತುಳಸಜ್ಜಿ ದಾಟಿ ಓಡಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿರುವ ಇವರು, ನನಗೆ ಪದ್ಮಶ್ರಿ ಪ್ರಶಸ್ತಿಗಿಂತ ಇಲ್ಲೊಂದು ಪುಟ್ಟ ಸಂಕ ಕಟ್ಟಿಕೊಟ್ಟು ಉಪಕಾರ ಮಾಡಿ ಎಂದು ಕೈಮುಗಿದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!