ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಶಾಕ್ ಕೊಟ್ಟ ಸುಪ್ರೀಂ: ಅವಿಶ್ವಾಸ ನಿರ್ಣಯ ಮಂಡನೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನದಲ್ಲಿ ನ್ಯಾಷನಲ್ ಅಸೆಂಬ್ಲಿಯನ್ನು ಪುನಸ್ಥಾಪಿಸಿ ಪಾಕ್ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಏ.9ರಂದು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮೇಲೆ ಮತದಾನಕ್ಕೆ ನಿರ್ದೇಶನ ನೀಡಿದೆ.

ಏ.9ರಂದು ಹೊಸ ಪ್ರಧಾನಿಯನ್ನು ಆಯ್ಕೆ ಮಾಡುವಂತೆ ಅದು ಸೂಚಿಸಿದೆ.ಇದರೊಂದಿಗೆ ಇಮ್ರಾನ್ ಖಾನ್ ಅವರಿಗೆ ತೀವ್ರ ಹಿನ್ನಡೆಯುಂಟಾಗಿದೆ.

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ ಸೇರಿದಂತೆ ಪಾಕ್ ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಕುರಿತಂತೆ ಪಾಕಿಸ್ತಾನಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಶ ಉಮರ್ ಅಟಾ ಬಂಡಿಯಾಲ್ ಅವರು ಗುರುವಾರ ರಾತ್ರಿ ಆದೇಶ ನೀಡಿದ್ದಾರೆ.

ನ್ಯಾಷನಲ್ ಅಸೆಂಬ್ಲಿಯಲ್ಲಿ ಉಪಸ್ಪೀಕರ್ ಕಾಸಿಮ್ ಸೂರಿ ಅವರು ಇಮ್ರಾನ್ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ತಿರಸ್ಕರಿಸಿ ರೂಲಿಂಗ್ ನೀಡಿದ್ದರು. ಆದರೆ ಇದು ಪಾಕ್ ಸಂವಿಧಾನದ 95ನೇ ವಿಧಿಯ ಉಲ್ಲಂಘನೆ ಎಂಬ ಆರೋಪ ಕೇಳಿಬಂದಿತ್ತು.ಈ ಬಗ್ಗೆ ಕಳೆದ ನಾಲ್ಕು ದಿನಗಳಿಂದ ಪಾಕ್ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಗುರುವಾರ ರಾತ್ರಿ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.

ಇದಕ್ಕೂ ಮುನ್ನ ಉಪಸ್ಪೀಕರ್ ಅವರು ಅವಿಶ್ವಾಸ ಗೊತ್ತುವಳಿ ತಿರಸ್ಕರಿಸಿದ ಬೆನ್ನಿಗೇ ಇಮ್ರಾನ್ ಖಾನ್ ಅವರು ಪಾಕ್ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆಗೆ ಶಿಫಾರಸು ಮಾಡಿದ್ದು, ಇದರಂತೆ ಪಾಕ್ ಅಧ್ಯಕ್ಷ ಆರೀಫ್ ಅಲ್ವಿ ಅವರು ವಿಸರ್ಜನೆ ಘೋಷಿಸಿದ್ದರು. ಅಲ್ಲದೆ 90 ದಿನಗಳೊಳಗೆ ಸಾರ್ವತ್ರಿಕ ಚುನಾವಣೆ ನಡೆಸುವಂತೆಯೂ ಸೂಚಿಸಿದ್ದರು. ಆದರೆ ಚುನಾವಣಾ ಆಯೋಗ 90 ದಿನಗಳೊಳಗೆ ಚುನಾವಣೆ ನಡೆಸುವುದು ಅಸಾಧ್ಯ ಎಂದಿತ್ತಲ್ಲದೆ, ಐವರು ನ್ಯಾಯಾಶರನ್ನೊಳಗೊಂಡ ಪಾಕ್ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಇದೀಗ ಅಸೆಂಬ್ಲಿ ವಿಸರ್ಜನೆಗೆ ಇಮ್ರಾನ್‌ಗೆ ಯಾವುದೇ ಅಕಾರ ಇಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!