ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪಾಚ್ಯದಲ್ಲಿ ಸಂಘರ್ಷ ತಾರಕ್ಕೇರುತ್ತಿದ್ದು, ಇದರ ನಡುವೆ ಅಮೆರಿಕ ಕಾಂಗ್ರೆಸ್ಸಿನ ಸಂಶೋಧನಾ ಸೇವೆ ಸ್ಫೋಟಕ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಸುರಕ್ಷಿತ ಸ್ವರ್ಗ ಎಂದು ಉಲ್ಲೇಖಿಸಿದ್ದಾರೆ.
ದಕ್ಷಿಣ ಏಷ್ಯಾ ತಜ್ಞ ಕೆ. ಅಲನ್ ಕ್ರೋನ್ಸ್ಟಾಡ್ಟ್ ಸಿದ್ಧಪಡಿಸಿದ ವರದಿಯಲ್ಲಿ ಪಾಕ್ ನಿರಂತರವಾಗಿ ಉಗ್ರರನ್ನು ಬೆಳೆಸುತ್ತಿದ್ದು, ಆಶ್ರಯ ನೀಡುತ್ತಿದೆ. ಅದರಲ್ಲೂ ಭಾರತ ವಿರುದ್ಧ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಈ ಕುರಿತು ಮಾರ್ಚ್ 25 ರಂದು ವರದಿ ನೀಡಿದ್ದು, ಪಾಕಿಸ್ತಾನದಲ್ಲಿ ಆಶ್ರಯ ಪಡೆಯುತ್ತಿರುವ 15 ಭಯೋತ್ಪಾದಕ ಸಂಘಟನೆಗಳ ಪಟ್ಟಿ ಬಿಡುಗಡೆ ಮಾಡಿದೆ. ಅವುಗಳಲ್ಲಿ ಹಲವು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆಗಳು ಎಂದು ವರದಿಯಲ್ಲಿ ಹೇಳಿವೆ. ಉಳಿದಂತೆ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಹರ್ಕತ್-ಉಲ್-ಜಿಹಾದ್ ಇಸ್ಲಾಮಿ, ಹರ್ಕತ್-ಉಲ್-ಮುಜಾಹಿದ್ದೀನ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿವೆ.
ಈ ಮೂಲಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ ಎನ್ನುತ್ತಿರುವ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಕಳಚಿದೆ.



