May 1, 2026
Friday, May 1, 2026
spot_img

ಯುಪಿ ಮಕುಟಕ್ಕೆ ಮತ್ತೊಂದು ಗರಿ: ನೋಯ್ಡಾ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ಗೆ ‘ನಮೋ’ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ನಾಗರಿಕ ವಿಮಾನಯಾನ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಉತ್ತರ ಪ್ರದೇಶದ ಜೇವರ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ದೆಹಲಿ-ಎನ್‌ಸಿಆರ್ ಪ್ರದೇಶದ ಮೂರನೇ ವಾಣಿಜ್ಯ ವಿಮಾನ ನಿಲ್ದಾಣವಾಗಿರುವ ಇದು, ವಾರ್ಷಿಕ 1.2 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಬೃಹತ್ ಸಾಮರ್ಥ್ಯವನ್ನು ಹೊಂದಿದೆ.

ಉದ್ಘಾಟನಾ ಸಮಾರಂಭದಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದಿನ ಈ ಕಾರ್ಯಕ್ರಮವು ಕೇವಲ ಒಂದು ವಿಮಾನ ನಿಲ್ದಾಣದ ಉದ್ಘಾಟನೆಯಲ್ಲ; ಇದು ವಿಕಸಿತ ಉತ್ತರ ಪ್ರದೇಶ ಮತ್ತು ವಿಕಸಿತ ಭಾರತದ ಯಾನದಲ್ಲಿ ಹೊಸ ಅಧ್ಯಾಯದ ಆರಂಭ” ಎಂದು ಬಣ್ಣಿಸಿದರು.

ಈ ವಿಮಾನ ನಿಲ್ದಾಣವು ಕೇವಲ ಪ್ರಯಾಣಿಕರ ಓಡಾಟಕ್ಕೆ ಸೀಮಿತವಾಗದೆ, ಈ ಭಾಗದ ಆರ್ಥಿಕ ಚಿತ್ರಣವನ್ನೇ ಬದಲಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಪಶ್ಚಿಮ ಉತ್ತರ ಪ್ರದೇಶದ ರೈತರ ಬೆಳೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ವೇಗವಾಗಿ ತಲುಪಲಿವೆ. ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳು ಸೃಜನೆಯಾಗಲಿವೆ. ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಜಾಗತಿಕ ಸಂಪರ್ಕ ದೊರೆಯಲಿದೆ.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ನೋಯ್ಡಾ ಅಭಿವೃದ್ಧಿಯಿಂದ ವಂಚಿತವಾಗಿತ್ತು ಎಂದು ಟೀಕಿಸಿದ ಮೋದಿ, “ಇಂದು ಬಿಜೆಪಿ ಆಡಳಿತದಲ್ಲಿ ನೋಯ್ಡಾವು ಅಭಿವೃದ್ಧಿಯ ಶಕ್ತಿಶಾಲಿ ಎಂಜಿನ್ ಆಗಿ ಮಾರ್ಪಟ್ಟಿದೆ. ಜಗತ್ತನ್ನೇ ಎದುರುಗೊಳ್ಳಲು ಸಜ್ಜಾಗಿರುವ ಈ ನಗರವು ‘ಸ್ವಾವಲಂಬಿ ಭಾರತ’ದ ಸ್ಫೂರ್ತಿಯನ್ನು ಪಸರಿಸುತ್ತಿದೆ” ಎಂದು ಹೆಮ್ಮೆಯಿಂದ ಹೇಳಿದರು.

ಮುಂದಿನ ದಿನಗಳಲ್ಲಿ ಸಣ್ಣ ನಗರಗಳಿಗೂ ವಿಮಾನಯಾನ ಸೌಲಭ್ಯ ಕಲ್ಪಿಸುವ ಸರ್ಕಾರದ ದೃಢ ಸಂಕಲ್ಪವನ್ನು ಪ್ರಧಾನಿ ಪುನರುಚ್ಚರಿಸಿದರು. ಸುಮಾರು 29,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ದೇಶಾದ್ಯಂತ ಹೊಸ ವಿಮಾನ ನಿಲ್ದಾಣಗಳು ಮತ್ತು 200 ಹೆಲಿಪ್ಯಾಡ್‌ಗಳನ್ನು ನಿರ್ಮಿಸುವ ಬೃಹತ್ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಈ ಐತಿಹಾಸಿಕ ಕ್ಷಣಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !