July 10, 2026
Friday, July 10, 2026
spot_img

ವೈಭವ್ ಬ್ಯಾಟ್ ಮೇಲೆ ಪಾಕ್ ಕಣ್ಣು: ಎಐ ತಂತ್ರಜ್ಞಾನದ ಆರೋಪಕ್ಕೆ ಸಿಕ್ಕಿತು ಖಡಕ್ ರಿಪ್ಲೈ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಕೋಟ್ಯಂತರ ರೂಪಾಯಿ ಮೊತ್ತಕ್ಕೆ ಹರಾಜಾಗಿ ಸುದ್ದಿಯಾಗಿದ್ದ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ, ಈಗ ಮೈದಾನದ ಹೊರಗೂ ಸುದ್ದಿಯಲ್ಲಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಕಂಡು ಅಚ್ಚರಿಗೊಂಡಿರುವ ಪಾಕಿಸ್ತಾನದ ಕ್ರೀಡಾ ವಿಶ್ಲೇಷಕರೊಬ್ಬರು ಮಾಡಿರುವ ಹಾಸ್ಯಾಸ್ಪದ ಆರೋಪಕ್ಕೆ ವೈಭವ್ ನೀಡಿರುವ ತಿರುಗೇಟು ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಾಕಿಸ್ತಾನದ ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ವೈಭವ್ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ ವಿಚಿತ್ರವಾದ ಹೇಳಿಕೆ ನೀಡಿದ್ದರು. “15 ವರ್ಷದ ಹುಡುಗ ಇಷ್ಟು ವೇಗವಾಗಿ ಮತ್ತು ನಿಖರವಾಗಿ ಸಿಕ್ಸರ್ ಬಾರಿಸಲು ಸಾಧ್ಯವೇ ಇಲ್ಲ. ವೈಭವ್ ಸೂರ್ಯವಂಶಿ ಅವರ ಬ್ಯಾಟ್‌ನಲ್ಲಿ ಯಾವುದೋ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಚಿಪ್ ಅಳವಡಿಸಿರುವ ಅನುಮಾನವಿದೆ. ಅವರ ಬ್ಯಾಟ್ ಅನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು,” ಎಂದು ಗಂಭೀರವಾಗಿಯೇ ಆರೋಪಿಸಿದ್ದರು.

ಬ್ಯಾಟ್‌ನಲ್ಲಿರುವ ಈ ಚಿಪ್ ಕಾರಣದಿಂದಲೇ ಚೆಂಡು ಎಲ್ಲಿ ಬರುತ್ತದೆ ಎಂಬುದು ಅವರಿಗೆ ಮೊದಲೇ ತಿಳಿಯುತ್ತದೆ ಎಂಬುದು ನೌಮಾನ್ ಅವರ ವಾದವಾಗಿತ್ತು.

ಪಾಕಿಸ್ತಾನದ ಈ ವಿಶ್ಲೇಷಕನ ಆರೋಪಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಹಂಚಿಕೊಂಡಿರುವ ವಿಡಿಯೋದಲ್ಲಿ ವೈಭವ್ ಅತ್ಯಂತ ವಿನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಆಕ್ರೋಶ ವ್ಯಕ್ತಪಡಿಸದೆ, ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಪಾಕ್ ವಿಶ್ಲೇಷಕನ ಬಾಯಿ ಮುಚ್ಚಿಸಿದ್ದಾರೆ.

“ನನ್ನ ಬ್ಯಾಟ್‌ನಲ್ಲಿ ಚಿಪ್ ಏನಾದರೂ ಇದ್ದರೆ, ಅದನ್ನು ಖಂಡಿತವಾಗಿಯೂ ದೇವರೇ ಅಳವಡಿಸಿ ಕಳುಹಿಸಿದ್ದಾರೆ. ನಾನು ಬ್ಯಾಟಿಂಗ್ ಮಾಡಲು ಹೋಗುವಾಗ ದೇವರು ಮೇಲಿಂದಲೇ ನನಗೆ ವಿಶೇಷ ಶಕ್ತಿ ನೀಡುತ್ತಿದ್ದೇನೆ ಎಂದು ಹೇಳಿದ್ದಾನೆ. ನಾನು ಕೇವಲ ಆ ಶಕ್ತಿಯನ್ನು ಬಳಸಿಕೊಂಡು ಆಡುತ್ತಿದ್ದೇನೆ ಅಷ್ಟೇ,” ಎಂದು ವೈಭವ್ ನಗುತ್ತಾ ಉತ್ತರಿಸಿದ್ದಾರೆ.

ವೈಭವ್ ಅವರ ಈ ಸಮಯಪ್ರಜ್ಞೆ ಮತ್ತು ಪಕ್ವತೆಯ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 15ನೇ ವಯಸ್ಸಿನಲ್ಲೇ ಇಂತಹ ಟೀಕೆಗಳನ್ನು ಹಸನ್ಮುಖಿಯಾಗಿ ಎದುರಿಸುತ್ತಿರುವ ವೈಭವ್ ಅವರ ಮನೋಬಲಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !