May 6, 2026
Wednesday, May 6, 2026
spot_img

ಟೀಮ್ ಇಂಡಿಯಾ ಜೊತೆ ಪಂದ್ಯ ಆಡಲು ಪಾಕಿಸ್ತಾನಕ್ಕೆ ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಕ್ರೀಡಾ ಸಂಬಂಧಗಳು ಮೊಟಕುಗೊಂಡಿದ್ದು, ಇದೀಗ ಮತ್ತೆ ಪುನಾರಂಭದ ಮುನ್ಸೂಚನೆಯನ್ನು ಕೇಂದ್ರ ಸರಕಾರ ನೀಡಿದೆ.

ಈಗಾಗಲೇ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳಿಗೂ ಭಾರತ ಅಂತ್ಯ ಹಾಡಿದೆ. ಇದರಿಂದ ಭಾರತ ತಂಡ ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ ಪ್ರಯಾಣಿಸುವುದಾಗಲಿ, ಇತ್ತ ಪಾಕ್ ಭಾರತಕ್ಕೆ ಬರುವುದಾಗಲಿ ಎಲ್ಲವೂ ನಿಂತಿದೆ.

ಇದೀಗ ಕೇಂದ್ರ ಸರ್ಕಾರವು ಪಾಕಿಸ್ತಾನಿ ಆಟಗಾರರು ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಿದೆ. ಐಸಿಸಿ ಹಾಗೂ ಎಸಿಸಿ ಟೂರ್ನಿಗಳಿಗೆ ಆಡಲು ಪ್ರಯಾಣಿಸಲು ಅನುಮತಿ ನೀಡಿದೆ.

ಈ ಸಂಬಂಧ ಕ್ರೀಡಾಪಟುಗಳು, ತಂಡದ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಆಡಳಿತ ಸಂಸ್ಥೆಗಳ ಪದಾಧಿಕಾರಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸುವ ಕುರಿತು ಕ್ರೀಡಾ ಸಚಿವಾಲಯ ಚರ್ಚಿಸಿದೆ.

ಇತ್ತ ಭಾರತದಲ್ಲಿ ಆಯೋಜಿಸುವ ಪಂದ್ಯಕ್ಕೆ ಪಾಕಿಸ್ತಾನಿ ಆಟಗಾರರು ಭಾಗವಹಿಸಲು ಅನುಮತಿ ಇದ್ದು, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದ ಸರಕಾರವು, ಎಲ್ಲ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು, ಭಾರತೀಯ ಒಲಿಂಪಿಕ್ ಸಂಘ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ ಸೇರಿದಂತೆ ಇತರರಿಗೆ ಪ್ರಮುಖ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದೆ.

ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಕ್ರೀಡಾಕೂಟಗಳ ವಿಚಾರದಲ್ಲಿ ಅಂತರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ನಿಯಮಗಳು ಮತ್ತು ನಮ್ಮ ಕ್ರೀಡಾಪಟುಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !