ಆರ್ಥಿಕ ಹೊಡೆತಕ್ಕೆ ಸಿಲುಕಿದ ಪಾಕ್: ಟೊಮೇಟೋ ಕೆಜಿಗೆ 500, ಈರುಳ್ಳಿ ಕೆಜಿಗೆ 400 ರೂಪಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಪಾಕಿಸ್ತಾನದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸಂಕಷ್ಟಗಳನ್ನು ಎದುರಾಗುತ್ತಿದ್ದು, ಆರ್ಥಿಕ ಪರಿಸ್ಥಿತಿ, ಪಾತಾಳಕ್ಕೆ ಕುಸಿದಿದ್ದು, ಅದರ ನಡುವೆಯೂ ಜನ ಬದುಕುತ್ತಿದ್ದಾರೆ.

ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ದೇಶದ ಬಹುತೇಕ ಭಾಗಗಳಲ್ಲಿ ಆಹಾರದ ಅಭಾವ ಹಾಗೂ ತೀವ್ರ ಬೆಲೆಏರಿಕೆ ಸಮಸ್ಯೆ ತಂದೊಡ್ಡಿದೆ. ಒಂದರ ಮೇಲೆ ಒಂದರಂತೆ ಇಲ್ಲಿನ ಜನತೆಗೆ ಸಮಸ್ಯೆಗಳು ಎದುರಾಗಿದ್ದರಿಂದ ಬದುಕುವುದೇ ದುಸ್ತರವಾಗಿದೆ.

ಪಾಕಿಸ್ತಾನದಲ್ಲಿನ ಹಣದುಬ್ಬರ ಎಷ್ಟು ತೀವ್ರವಾಗಿದೆ ಎಂದರೆ, ದಿನಬಳಕೆಯ ಅಗತ್ಯ ತರಕಾರಿಗಳದರ ಗಗನಕ್ಕೇರಿದೆ. ಇತ್ತೀಚಿನ ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಪ್ರತಿ ಕೆಜಿ ಟೊಮೇಟೋಗೆ 500 ರೂಪಾಯಿ ಆಗಿದ್ದರೆ, ಈರುಳ್ಳಿ ಬೆಲೆ ಕೆಜಿಗೆ 400 ರೂಪಾಯಿ ಆಗಿದೆ. ತರಕಾರಿಗಳ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಪಾಕಿಸ್ತಾನವೀಗ ಭಾರತದ ಸಹಾಯ ಕೋರಿದೆ.

ಲಾಹೋರ್‌ನ ತರಕಾರಿ ಮಾರುಕಟ್ಟೆಯ ಡೀಲರ್‌ಗಳು ಪಾಕಿಸ್ತಾನದ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ಅದರಂತೆ ತರಕಾರಿಗಳ ಬೆಲೆ ನಿಯಂತ್ರಿಸಲು ಭಾರತದಿಂದ ಟೊಮೇಟೋ ಹಾಗೂ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ಎದುರಾದ ಕಂಡೂಕೆಳರಿಯದ ಪ್ರವಾಹದಿಂದಾಗಿ ತರಕಾರಿಗಳು ಹಾಗೂ ಇತರ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಈ ಕಾರಣದಿಂದಾಗಿ, ಪಾಕಿಸ್ತಾನದಲ್ಲಿ ತರಕಾರಿ ಸೇರಿದಂತೆ ಅನೇಕ ಅಗತ್ಯ ಆಹಾರ ಪದಾರ್ಥಗಳ ಕೊರತೆಯ ಬಿಕ್ಕಟ್ಟು ಉಂಟಾಗಿದೆ. ಟೊಮೆಟೊ ಮತ್ತು ಈರುಳ್ಳಿ ಮಾತ್ರವಲ್ಲದೆ, ಲಾಹೋರ್ ಸೇರಿದಂತೆ ಪಾಕಿಸ್ತಾನದ ಪಂಜಾಬ್‌ನ ಹಲವು ಭಾಗಗಳಲ್ಲಿ, ಎಲ್ಲಾ ತರಕಾರಿಗಳ ಬೆಲೆ ದಾಖಲೆಯ ಮಟ್ಟದಲ್ಲಿದೆ.

ಪ್ರವಾಹದಿಂದಾಗಿ ಬಲೂಚಿಸ್ತಾನ, ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಿಂದ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ಇದರಿಂದಾಗಿ ಟೊಮೆಟೊ, ಈರುಳ್ಳಿ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು. ಮುಂದಿನ ದಿನಗಳಲ್ಲಿ ಈರುಳ್ಳಿ ಮತ್ತು ಟೊಮೇಟೊ ಬೆಲೆ ಕೆಜಿಗೆ 700 ರೂಪಾಯಿ ದಾಟಬಹುದು ಎಂಬ ಆತಂಕ ಅವರದಾಗಿದೆ. ಅದೇ ರೀತಿ ಆಲೂಗಡ್ಡೆ ಕೂಡ ಕೆಜಿ ಕೆಲ ತಿಂಗಳ ಹಿಂದೆ 40 ರೂಪಾಯಿ ಇದ್ದರೆ, ಮುಂದಿನ ದಿನದಲ್ಲಿ ಇದು 120 ರೂಪಾಯಿ ತಲುಪಬಹುದು ಎನ್ನಲಾಗಿದೆ.

ಟೊಮ್ಯಾಟೊ ಬೆಲೆ ಸರ್ಕಾರಿ ಬೆಲೆಗೆ ಹೋಲಿಸಿದರೆ 6 ಪಟ್ಟು ಹೆಚ್ಚಾಗಿದೆ. ಸರಕಾರ ಟೊಮೇಟೊ ಕೆಜಿಗೆ 80 ರೂ. ದರ ನಿಗದಿ ಮಾಡಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 500 ರೂ.ಗೆ ಏರಿದೆ. ಅದೇ ರೀತಿ, ಈರುಳ್ಳಿಯ ಅಧಿಕೃತ ದರ ಕೆಜಿಗೆ 61 ರೂ. ಆದರೆ ಅದು ಕೆಜಿಗೆ 400 ರೂ.ಗಿಂತ ಸುಮಾರು 7 ಪಟ್ಟು ಹೆಚ್ಚು ಸಿಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರವಾಹದಿಂದಾಗಿ ಪಾಕಿಸ್ತಾನ ಕನಿಷ್ಠ $5.5 ಬಿಲಿಯನ್ ನಷ್ಟವಾಗಿದೆ. ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕಬ್ಬು ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!