ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಸಂಭ್ರಮಾಚರಣೆಯಲ್ಲಿ ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಿದ್ದು, ಘಟನೆ ಸಂಬಂಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆ ಸಿಪಿಐ ದಯಾನಂದ ಶೇಗುಣಸಿ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 153, 153(ಬಿ)ರಡಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಮುಸ್ಲಿಂ ಬೆಂಬಲಿಗರು ಘೋಷಣೆ ಕೂಗಿದ್ದಾರೆಂದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಆಸೀಫ್ ಸೇಠ್ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿ ಬಂದಿದೆ. ಕೈ ಅಭ್ಯರ್ಥಿ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡ ಕೆಲ ಕಿಡಿಗೇಡಿಗಳು ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿತ್ತು.
ಶನಿವಾರ ಆಸೀಫ್ ಸೇಠ್ ಗೆಲುವು ಖಚಿತವಾಗುತ್ತಿದ್ದಂತೆ ಅಪಾರ ಸಂಖ್ಯೆಯ ಬೆಂಬಲಿಗರು ಸೇರಿ ಪಟಾಕಿ ಹೊಡೆದು ಸಂಭ್ರಮಾಚರಣೆ ನಡೆಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಧ್ವಜವನ್ನು ಹಿಡಿದು ಜಿಂದಾಬಾದ್ ಘೋಷಣೆ ವೇಳೆ ಕೆಲ ಕಿಡಿಗೇಡಿ ಯುವಕರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ.
ಕೂಡಲೇ ಅಲ್ಲಿದ್ದ ಪೊಲೀಸರು ಯುವಕರ ಬಳಿ ಹೋಗಿ ಈ ರೀತಿ ವರ್ತನೆ ಸರಿಯಲ್ಲ, ಮತ್ತೊಮ್ಮೆ ಈ ಕೂಗು ಕೇಳಿಸಿದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ತಾಕೀತು ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್ ಗೆಲುವಿನಲ್ಲಿ ಇಂತಹ ದೇಶದ್ರೋಹಿ ಘೋಷಣೆ ಕೂಗುವುದು ಸಮಂಜಸವಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹ ವ್ಯಕ್ತವಾಗಿದೆ.