ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ರೈಲು ಹೈಜಾಕ್ ನಡೆಸಿದ ಬಲೂಚ್ ಲಿಬರೇಷನ್ ಆರ್ಮಿ ಪೇಶಾವರಕ್ಕೆ ಹೋಗುವ ರೈಲಿನಿಂದ ಅಪಹರಿಸಲ್ಪಟ್ಟ 50 ಒತ್ತೆಯಾಳುಗಳನ್ನು ಕೊಂದಿದ್ದೇವೆ ಎಂದು ಖಚಿತಪಡಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗುವುದು ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ. ರೈಲು ಹೈಜಾಕ್ ಮಾಡಿ 200 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಬಲೂಚ್ ದಂಗೆಕೋರರು, ಪಾಕಿಸ್ತಾನ ಸೇನೆ ನಮ್ಮ ವಿರುದ್ಧ ನಡೆಸಿದ ದಾಳಿಗೆ ಪ್ರತೀಕಾರವಾಗಿ 50 ಒತ್ತೆಯಾಳುಗಳನ್ನ ಗಲ್ಲಿಗೇರಿಸಿರುವುದಾಗಿ ಹೇಳಿಕೊಂಡಿದೆ. ಮಿಲಿಟರಿ ಕಾರ್ಯಾಚರಣೆಯನ್ನು ರದ್ದುಗೊಳಿಸಿ, ಬಂಧಿಸಿರುವ ಬಲೂಚ್ ಖೈದಿಗಳನ್ನು 20 ಗಂಟೆಗೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಳಿದ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಎಚ್ಚರಿಕೆ ನೀಡಿದೆ.
ದಂಗೆಕೋರರು ಹೇಳುವ ಪ್ರಕಾರ, ಅವರ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳು ಪಾಕಿಸ್ತಾನದ ಸೇನೆ, ಪೊಲೀಸ್, ಫ್ರಾಂಟಿಯರ್ ಕಾರ್ಪ್ಸ್ ಮತ್ತು ಇತರ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇತ್ತ ಬಲೂಚ್ ಲಿಬರೇಷನ್ ಆರ್ಮಿ ವಶದಲ್ಲಿರುವ ಪ್ರಯಾಣಿಕರ ರಕ್ಷಣೆಗೆ ಪಾಕ್ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, 190 ಪ್ರಯಾಣಿಕರನ್ನು ರಕ್ಷಿಸಿದೆ .30 ಪ್ರತ್ಯೇಕತಾವಾದಿಗಳನ್ನು ಕೊಂದಿದೆ.