ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಆರ್ಥಿಕ ಸ್ಥಿತಿ ಅತ್ಯಂತ ಸಂಕಷ್ಟಕರ ಹಂತಕ್ಕೆ ತಲುಪಿರುವುದನ್ನು ಪ್ರಧಾನಿ ಶೆಹಬಾಜ್ ಷರೀಫ್ ಸ್ವತಃ ಒಪ್ಪಿಕೊಂಡಿದ್ದಾರೆ. ದೇಶದ ಆರ್ಥಿಕ ದುಸ್ಥಿತಿಯನ್ನು ವಿವರಿಸಿದ ಅವರು, ಪಾಕಿಸ್ತಾನವು ಮಿತ್ರ ರಾಷ್ಟ್ರಗಳನ್ನು ಭೇಟಿಯಾದಾಗ ಸಹಾಯ ಕೇಳಲು ಬಂದಿದ್ದೇವೆ ಎಂಬ ಭಾವನೆ ಅವರಿಗೆ ಮೂಡುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಸಾಲದ ಭಾರದಿಂದಾಗಿ ನಮ್ಮ ತಲೆಗಳು ಅವಮಾನದಿಂದ ತಗ್ಗಿವೆ ಎಂದು ಅವರು ಹೇಳಿದ್ದಾರೆ.
ಪರಮಾಣು ಶಕ್ತಿಯ ರಾಷ್ಟ್ರವಾಗಿದ್ದರೂ, ಸಣ್ಣ ಆರ್ಥಿಕ ಅಗತ್ಯಗಳಿಗೂ ಇತರರ ಅವಲಂಬನೆ ಅನಿವಾರ್ಯವಾಗಿರುವುದು ಪಾಕಿಸ್ತಾನಕ್ಕೆ ದೊಡ್ಡ ವಿಪರ್ಯಾಸವಾಗಿದೆ. ಚೀನಾ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪಡೆದ ಸಾಲದ ಬಡ್ಡಿಯೇ ಸರ್ಕಾರಕ್ಕೆ ಭಾರೀ ಹೊರೆ ಆಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಮತ್ತು ಇಂಧನದ ಕೊರತೆ ಜನಜೀವನವನ್ನು ಕಂಗೆಡಿಸಿದೆ. ವಿದೇಶಿ ವಿನಿಮಯ ಸಂಗ್ರಹ ಕೆಲವೇ ವಾರಗಳ ಆಮದಿಗೆ ಸಾಕಾಗುವ ಮಟ್ಟದಲ್ಲಿದೆ.
ಇದನ್ನೂ ಓದಿ:
ಉದ್ಯಮಿಗಳು ಹೆಚ್ಚಿನ ತೆರಿಗೆ ಪಾವತಿಸಬೇಕು ಹಾಗೂ ಸರ್ಕಾರ ವೆಚ್ಚ ಕಡಿತಗೊಳಿಸಬೇಕು ಎಂದು ಶೆಹಬಾಜ್ ಷರೀಫ್ ಕರೆ ನೀಡಿದ್ದಾರೆ. ತಜ್ಞರ ಪ್ರಕಾರ, ಪಾಕಿಸ್ತಾನದ ಆರ್ಥಿಕ ಅಸ್ಥಿರತೆ ದಕ್ಷಿಣ ಏಷ್ಯಾದ ಮೇಲೆ, ವಿಶೇಷವಾಗಿ ಭಾರತದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ. ಸುಧಾರಣೆಗಳಿಲ್ಲದೆ ಈ ಬಿಕ್ಕಟ್ಟಿನಿಂದ ಹೊರಬರುವುದು ಕಷ್ಟಕರ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.



