ಹರಿಯಾಲಿ ಮಶ್ರೂಮ್ ಒಂದು ರುಚಿಕರವಾದ ಹಾಗೂ ಆರೋಗ್ಯಕರ ಉತ್ತರ ಭಾರತೀಯ ಖಾದ್ಯವಾಗಿದ್ದು, ಪಾಲಕ್, ಕೊತ್ತಂಬರಿ ಸೊಪ್ಪು, ಪುದೀನಾ ಹಾಗೂ ಹಸಿಮೆಣಸಿನಕಾಯಿ ಸೇರಿಸಿ ತಯಾರಿಸುವ ಹಸಿರು ಗ್ರೇವಿ ಈ ಡಿಶ್‌ಗೆ ಮನಮೋಹಕ ಬಣ್ಣ ಮತ್ತು ರುಚಿ ನೀಡುತ್ತದೆ. ಚಪಾತಿ, ನಾನ್, ರೋಟಿ ಅಥವಾ ಜೀರಿಗೆ ರೈಸ್ ಜೊತೆಗೆ ಸವಿಯಲು ಇದು ಅತ್ಯುತ್ತಮ ಆಯ್ಕೆಯಾಗಿದೆ.
ಬೇಕಾಗುವ ಸಾಮಗ್ರಿಗಳು
ಅಣಬೆ (ಮಶ್ರೂಮ್) – 1 ಪ್ಯಾಕೆಟ್
ಪಾಲಕ್ ಸೊಪ್ಪು – 1 ಕಪ್
ಕೊತ್ತಂಬರಿ ಸೊಪ್ಪು – 1/2 ಕಪ್
ಪುದೀನಾ – ಸ್ವಲ್ಪ
ಹಸಿರು ಮೆಣಸಿನಕಾಯಿ – 2 ರಿಂದ 3
ಈರುಳ್ಳಿ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಗಟ್ಟಿ ಮೊಸರು – 2 ರಿಂದ 3 ಟೇಬಲ್ ಸ್ಪೂನ್
ಎಣ್ಣೆ ಅಥವಾ ಬೆಣ್ಣೆ – 2 ಟೀಸ್ಪೂನ್
ಜೀರಿಗೆ, ಚಕ್ಕೆ, ಲವಂಗ – ಸ್ವಲ್ಪ
ಅರಿಶಿನ, ಧನಿಯಾ ಪುಡಿ, ಗರಂ ಮಸಾಲಾ – ಅಗತ್ಯಕ್ಕೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ 2 ನಿಮಿಷ ನೆನೆಸಿಟ್ಟು, ಬಳಿಕ ಅದನ್ನು ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು ಹಸಿರು ಮೆಣಸಿನಕಾಯಿಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆ ಕಾಯಿಸಿ ಜೀರಿಗೆ, ಚಕ್ಕೆ ಮತ್ತು ಲವಂಗ ಹಾಕಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
ಈ ಹಂತದಲ್ಲಿ ಅರಿಶಿನ, ಧನಿಯಾ ಪುಡಿ ಹಾಗೂ ಗರಂ ಮಸಾಲಾ ಸೇರಿಸಿ, ನಂತರ ಮೊಸರು ಹಾಕಿ ಚೆನ್ನಾಗಿ ಕಲಸಿ. ಬಳಿಕ ರುಬ್ಬಿದ ಹಸಿರು ಪೇಸ್ಟ್ ಮತ್ತು ಉಪ್ಪು ಸೇರಿಸಿ 5 ನಿಮಿಷ ಕುದಿಸಿ. ಕೊನೆಗೆ ತೊಳೆದ ಮಶ್ರೂಮ್ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಸುಮಾರು 10 ನಿಮಿಷ ಬೇಯಿಸಿದರೆ ರುಚಿಯಾದ ಹರಿಯಾಲಿ ಮಶ್ರೂಮ್ ಸಿದ್ಧವಾಗುತ್ತದೆ.



