ಹೊಸದಿಗಂತ ವರದಿ, ಪಾಂಡವಪುರ :
ಆಕಸ್ಮಿಕ ಬೆಂಕಿ ತಗುಲಿ ಮೂರುವರೆ ಎಕರೆ ಕಬ್ಬು ಸುಟ್ಟುಭಸ್ಮವಾಗಿರುವ ಘಟನೆ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಚಂದ್ರೆ ಗ್ರಾಮದ ನಿವಾಸಿಗಳಾದ ಸ್ವಾಮೀಗೌಡ ಎಂಬುವರ ಅರ್ಧ ಎಕರೆ, ಚಿಕ್ಕಮರೀಗೌಡರ ಒಂದು ಎಕರೆ, ಲೋಕೇಶ್ ಅವರ ಅರ್ಧ ಎಕರೆ, ದಾಳೇಗೌಡ ಎಂಬುವರ ಒಂದು ಎಕರೆ ಹಾಗೂ ಸತೀಶ್ ಎಂಬುವರಿಗೆ ಸೇರಿದ ಅರ್ಧ ಎಕರೆಯಲ್ಲಿ ಬೆಳೆದಿದ್ದ ಕಬ್ಬು ಆಕಸ್ಮಿಕ ಬೆಂಕಿಯಿಂದ ಸುಟ್ಟುಭಸ್ಮವಾಗಿದೆ. ಇದರ ಜತೆಗೆ ಕಬ್ಬಿನ ಗದ್ದೆಯೊಳಗೆ ಹಾಕಿದ್ದ 100ಕ್ಕೂ ಅಧಿಕ ತೆಂಗಿನ ಸಸಿ, ಹನಿನೀರಾವರಿಯ ಪೈಪ್‌ಗಳು ಸಂಪೂರ್ಣವಾಗಿ ಸುಟ್ಟುಭಸ್ಮವಾಗಿದ್ದು ಲಕ್ಷಾಂತರ ರೂ.ನಷ್ಟವಾಗಿದೆ.
ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಬೆಂಕಿ ತಗುಲಿರುವ ವಿಷಯವನ್ನು ಅಕ್ಕಪಕ್ಕದ ರೈತರು ಕಬ್ಬಿನ ಗದ್ದೆ ಮಾಲೀಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ರೈತರು ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.