ಅಬ್ಬರಿಸಿದ ಪಾಂಡ್ಯಾ, ಕೊಹ್ಲಿ ಅರ್ಧಶತಕ: ಇಂಗ್ಲೆಂಡ್‌ ಗೆ 169 ರನ್‌ ಟಾರ್ಗೆಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಡಿಲೇಡ್‌ ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ – ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಫೀಲ್ಡೀಂಗ್‌ ಆಯ್ದುಕೊಂಡಿತು. ಟಾಸ್‌ ಸೋತು ಬ್ಯಾಟಿಂಗ್‌ ಗೆ ಇಳಿದ ಭಾರತದ ಆಟಗಾರರು ಆರಂಭಿಕವಾಗಿ ರನ್‌ ಗಳಿಗಾಗಿ ಸಾಹಸ ಪಟ್ಟರೂ ಅಂತಿಮವಾಗಿ 169 ರನ್‌ ಗಳ ಗುರಿಯನ್ನು ನೀಡಿದ್ದಾರೆ.

ಇಂಗ್ಲೆಂಡಿನ ಬೌಲರ್‌ ಗಳ ಬಿಗಿಯಾದ ಬಾಲಿಂಗ್‌ ಅನ್ನು ಸಮರ್ಥವಾಗಿ ಎದುರಿಸಿದ ಭಾರತೀಯ ಬ್ಯಾಟ್ಸ್‌ ಮನ್‌ ಗಳು 20 ಓವರ್‌ ಮುಕ್ತಾಯಕ್ಕೆ 4 ವಿಕೆಟ್‌ ಕಳೆದುಕೊಂಡು 168 ರನ್‌ ಸಿಡಿಸಿದ್ದಾರೆ. ಓಪ್ನರ್‌ ಆಗಿ ಕ್ರೀಸಿಗಿಳಿದ ಕೆ.ಎಲ್.ರಾಹುಲ್‌ ಎರಡನೇ ಓವರ್‌ ನಲ್ಲಿಯೇ 5 ರನ್ ಬಾರಿಸಿ ಕ್ರಿಸ್ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 47 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದ ರೋಹಿತ್ ಶರ್ಮಾ 28 ಎಸೆತಗಳಲ್ಲಿ 4 ಬೌಂಡರಿ ಸಹಿತ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ 14 ರನ್ ಬಾರಿಸಿ ಕ್ಯಾಚ್‌ ಔಟ್‌ ಆದರು.

75 ರನ್‌ ಗಳಿಗೆ 3 ವಿಕೆಟ್‌ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ ಹಾಗೂ ಹಾರ್ದಿಕ್‌ ಪಾಂಡ್ಯಾರ ಜತೆಯಾಟ ಆಸರೆ ನೀಡಿತು. ಇಬ್ಬರೂ ಸೇರಿ 61 ರನ್‌ ಕಲೆ ಹಾಕುವಲ್ಲಿ ಯಶಸ್ವಿಯಾದರು. ಅಡಿಲೇಡ್‌ ಮೈದಾನದಲ್ಲಿ ಮತ್ತೊಮ್ಮೆ ಮಿಂಚಿದ ವಿರಾಟ್‌ ಕೊಹ್ಲಿ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿ ಅರ್ಧಶತಕ ಸಿಡಿಸಿ ಕ್ರಿಸ್ ಜೋರ್ಡನ್‌ಗೆ ವಿಕೆಟ್ ಒಪ್ಪಿದರು. ಕ್ರೀಸ್‌ ನಲ್ಲೇ ಉಳಿದ ಪಾಂಡ್ಯಾ ಭಾರತ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ತಮ್ಮ ಅಬ್ಬರದಾಟದ ಕೊಡುಗೆ ನೀಡಿದರು. ಸಿಕ್ಸರ್‌ ಗಳ ಮೇಲೆ ಸಿಕ್ಸರ್‌ ಬಾರಿಸಿ 33 ಎಸೆತಗಳಲ್ಲಿ ಅಜೇಯ 63 ರನ್‌ ಸಿಡಿಸಿದರು.

ಪ್ರಸ್ತುತ 169ರನ್‌ ಗಳ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್‌ ತಂಡದ ಪರವಾಗಿ ಜೋಸ್‌ ಬಟ್ಲರ್‌ ಹಾಗೂ ಹೇಲ್ಸ್‌ ಕ್ರೀಸಿಗಿಳಿದಿದ್ದಾರೆ. ಫೈನಲ್‌ ತಲುಪುವ ಮಹದಾಸೆ ಎರಡೂ ತಂಡಗಳಿಗಿರುವುದರಿಂದ ಅಂತಿಮ ಫಲಿತಾಂಶ ಕಾದು ನೋಡಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!