ಬಾಚಣಿಗೆ-ಪ್ಲಾಸ್ಟಿಕ್ ತುಂಡಿನಲ್ಲಿ ಪುಟಾಣಿ ನುಡಿಸಿದ `ವರಾಹ ರೂಪಂ…’

ಹೊಸದಿಗಂತ ವರದಿ ಪುತ್ತೂರು:

ಇದೀಗ ಎಲ್ಲೆಡೆಯೂ `ಕಾಂತಾರ’ ಚಲನಚಿತ್ರದ್ದೇ ಹವಾ. ರಿಷಬ್ ಶೆಟ್ಟಿಯ ಅಭಿಮಾನಿಗಳ ಸ್ಟೇಟಸ್‍ಗಳಲ್ಲಿ ಇದರದ್ದೇ ಕಾರುಬಾರು, ಜತೆಗೆ ತರಹೇವಾರಿ ಮೀಮ್, ಹಾಡುಗಳ ಅನುಕರಣೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಕಾಣಬಹುದಾಗಿದೆ. ಇಲ್ಲೊಬ್ಬ ಪುಟ್ಟ ಬಾಲಕ `ಕಾಂತಾರ’ದ ಹಾಡನ್ನು ತನ್ನದೇ ಆದ ವಿಶಿಷ್ಟ ಸಂಗೀತವಾದ್ಯದ ಮೂಲಕ ಬಾರಿಸಿ ಗಮನ ಸೆಳೆಯುತ್ತಿದ್ದಾನೆ.

ಈ ಬಾಲಕನ ಹೆಸರು ಅಪ್ರಮೇಯ ದೇರಾಜೆ. ವಯಸ್ಸು ಐದೂವರೆ ವರ್ಷ. `ಎಲ್ಲರೂ ಕಾಂತಾರದ ಕುರಿತು ಮಾತಾಡ್ತಿದ್ದಾರೆ… ನಾನ್ಯಾಕೆ ಸುಮ್ನಿರ್ಲಿ…’ ಅಂತಿದ್ದ ಈ ಅಪ್ರಮೇಯ `ವರಾಹ ರೂಪಂ…’ ಹಾಡನ್ನು ಬಾಚಣಿಗೆ ಹಾಗೂ ಒಂದು ಪ್ಲಾಸ್ಟಿಕ್ ಹಿಡ್ಕೊಂಡ್ ನುಡಿಸಿದ್ದಾನೆ. ಹಿನ್ನಲೆಯ ಸಂಗೀತದೊಂದಿಗೆ ಅಪ್ರಮೇಯ ಲಯಬದ್ಧವಾಗಿ ಸಂಗೀತ ನುಡಿಸುತ್ತಿರುವುದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಪುಟಾಣಿಯ ತಂದೆ ಪಾಣಿನಿ ದೇರಾಜೆ ಮೆಲೋಡಿಕಾ ಮತ್ತು ಗಿಟಾರ್ ನುಡಿಸುವ ಮೂಲಕ ಅಪ್ರಮೇಯ ನುಡಿಸುವ `ವರಾಹ ರೂಪಂ…’ ಹಾಡಿಗೆ ಸಾಥ್ ನೀಡಿದ್ದಾರೆ.

ಈತನ ತಂದೆ ಪಾಣಿನಿ ದೇರಾಜೆ ಸಂಗೀತದ ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸುಮಾರು 30 ಸಂಗೀತ ವಾದ್ಯಗಳನ್ನು ನುಡಿಸಬಲ್ಲವರು. ತಾಯಿ ಸುಮಾ ಪಾಣಿನಿ ಇಂಜಿನೀಯರಿಂಗ್ ಪದವಿ ಮಾಡಿ ಅದೇ ಕ್ಷೇತ್ರದಲ್ಲಿ ಕೆಲವು ಕಾಲ ಕೆಲಸ ಮಾಡಿ ಈಗ ಬಿ.ಎಡ್. ಶಿಕ್ಷಣ ಪಡೆಯುತ್ತಿದ್ದಾರೆ. ಅಪ್ರಮೇಯನ ಇತರ ವಿಡಿಯೋಗಳು ಯೂಟ್ಯೂಬ್‍ನ `ಪಾಣಿನಿ ದೇರಾಜೆ’ ಎಂಬ ಚಾನೆಲ್‍ನಲ್ಲಿ `ಅಪ್ರಮೇಯ’ ಎಂಬ ಪ್ಲೇ ಲಿಸ್ಟ್‍ನಲ್ಲಿ ಲಭ್ಯ.

ಅಪ್ರಮೇಯ ಮೈಸೂರಿನ `ಅರಿವು’ ಶಾಲೆಯ ಯು.ಕೆ.ಜಿ. ಪುಟಾಣಿ. ಪುಟಾಣಿಯ ತಂದೆ ಪಾಣಿನಿ ದೇರಾಜೆ ಮೂಲತಃ ವಿಟ್ಲದವರು, ತಂದೆ ಮೂರ್ತಿ ದೇರಾಜೆ ರಂಗಕರ್ಮಿ. ಅಜ್ಜ ದೇರಾಜೆ ಸೀತಾರಾಮಯ್ಯ ಸಾಹಿತಿ. ಪುಟಾಣಿಯ ಇಡೀ ಕುಟುಂಬವೇ ಕಲೆ-ಸಾಹಿತ್ಯ ಪ್ರತಿಭಾವಂತರು. ಉದ್ಯಮಿಯಾಗಿದ್ದ ಪಾಣಿನಿ ದೇರಾಜೆ 30 ಸಂಗೀತ ವಾದ್ಯಗಳ ಪರಿಣಿತರು. ಮೈಸೂರಿನಲ್ಲಿ ಇವರು ಸಂಗೀತ ತರಗತಿಯನ್ನು ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!