ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಆತಿಥ್ಯ ವಹಿಸಲಿದ್ದು, 11 ಸದಸ್ಯ ರಾಷ್ಟ್ರಗಳು, 10 ಪಾಲುದಾರ ರಾಷ್ಟ್ರಗಳ ನಾಯಕರು ಹಾಗೂ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
18ನೇ BRICS ಶೃಂಗಸಭೆಗೆ ಸಿದ್ಧತೆಗಳು ಭರ್ಜರಿಯಾಗಿ ಸಾಗುತ್ತಿದ್ದು, ಭಾರತಕ್ಕೆ ಆಗಮಿಸುವ ವಿದೇಶಿ ಗಣ್ಯರಿಗೆ ಭಾರತೀಯ ಆಹಾರ ಸಂಸ್ಕೃತಿಯ ರುಚಿಯನ್ನು ಪರಿಚಯಿಸಲು ವಿಶೇಷ ಮೆನು ಸಿದ್ಧಪಡಿಸಲಾಗಿದೆ.
ಸಿರಿಧಾನ್ಯಕ್ಕೆ ಒತ್ತು
ಶೃಂಗಸಭೆಯ ಆತಿಥ್ಯ ವ್ಯವಸ್ಥೆಯಲ್ಲಿ ಆಹಾರಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ಸಿರಿಧಾನ್ಯ ಆಧಾರಿತ ಖಾದ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಿರಿಧಾನ್ಯಗಳ ಬಳಕೆಗೆ ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ BRICS ಗಣ್ಯರಿಗೆ ನೀಡುವ ಆಹಾರದಲ್ಲೂ ಅವುಗಳನ್ನು ಪರಿಚಯಿಸಲಾಗುತ್ತಿದೆ.
ಇದನ್ನೂ ಓದಿ:
ರುಚಿಗೆ ತಕ್ಕಂತೆ ಮಸಾಲೆ
ವಿವಿಧ ದೇಶಗಳಿಂದ ಆಗಮಿಸುವ ಅತಿಥಿಗಳ ಆಹಾರ ಪದ್ಧತಿ ಹಾಗೂ ರುಚಿಗೆ ಅನುಗುಣವಾಗಿ ಮೆನು ರೂಪಿಸಲಾಗಿದೆ. ಮಸಾಲೆ ಪ್ರಮಾಣವನ್ನು ಸಮತೋಲನದಲ್ಲಿರಿಸಲಾಗಿದ್ದು, ಎಲ್ಲರೂ ಭಾರತೀಯ ಖಾದ್ಯಗಳನ್ನು ಆಸ್ವಾದಿಸುವಂತೆ ನೋಡಿಕೊಳ್ಳಲಾಗಿದೆ. ಮುಖ್ಯವಾಗಿ ಭಾರತೀಯ ಮಸಾಲೆಗಳು, ಸಾಂಪ್ರದಾಯಿಕ ತರಕಾರಿಗಳು ಹಾಗೂ ಸ್ಥಳೀಯವಾಗಿ ಬೆಳೆಯುವ ತಾಜಾ ಉತ್ಪನ್ನಗಳನ್ನು ಬಳಸಲಾಗುತ್ತಿದೆ.
BRICS ಶೃಂಗಸಭೆಯ ಸಂದರ್ಭದಲ್ಲಿ ಭಾರತೀಯ ಆಹಾರವೇ ಪ್ರಮುಖ ಆಕರ್ಷಣೆಯಾಗುವಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಸಿಹಿ ತಿಂಡಿಗಳಲ್ಲೂ ಭಾರತೀಯ ಸಿಹಿತಿನಿಸುಗಳಿಗೆ ಆದ್ಯತೆ ನೀಡಲಾಗಿದ್ದು, ದೇಶದ ವೈವಿಧ್ಯಮಯ ಪಾಕಪರಂಪರೆಯನ್ನು ವಿದೇಶಿ ಅತಿಥಿಗಳಿಗೆ ಪರಿಚಯಿಸುವ ಪ್ರಯತ್ನ ನಡೆದಿದೆ.
ಏನಿದೆ ನೋಡಿ
BRICS ಮೆನುವಿನಲ್ಲಿ ಜರ್ಮನ್ ಪೊಟೇಟೊ-ಮಸ್ಟರ್ಡ್ ಸಲಾಡ್, ಕ್ಯಾರಮಲೈಸ್ಡ್ ಈರುಳ್ಳಿ, ಮಿಕ್ಸ್ ವೆಜ್ ಪಿಕಲ್, ಪನೀರ್ ಮಖನಿ, ಹೋಮ್‌ಸ್ಟೈಲ್ ಛೋಲೆ, ಪೆಸ್ಟೊ ಜೊತೆ ಸಾಟೆಡ್ ವೆಜಿಟೆಬಲ್ಸ್ ಹಾಗೂ ಅಜ್ವೈನ್ ಫಿಶ್ ಕರಿ ಸೇರಿದಂತೆ ಹಲವು ಖಾದ್ಯಗಳು ಸ್ಥಾನ ಪಡೆದಿವೆ.



