June 27, 2026
Saturday, June 27, 2026
spot_img

ಪರೀಕ್ಷೆಗೂ ಮುನ್ನವೇ ‘ಪೇಪರ್ ಲೀಕ್’ ಬಾಂಬ್..! ಟಿಇಟಿ ಮುಂದೂಡಿದ ಮಹಾರಾಷ್ಟ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ-2026) ನಡೆಸುವ ಮೊದಲು ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಅಭ್ಯರ್ಥಿಗಳ ಹಿತಾಸಕ್ತಿ ಹಾಗೂ ಪರೀಕ್ಷೆಯ ವಿಶ್ವಾಸಾರ್ಹತೆ ಕಾಪಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶಂಕಿತ ದಾಖಲೆಗಳಿಂದ ಬಯಲಾಯ್ತು ಪ್ರಕರಣ

ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕೆಲವು ವ್ಯಕ್ತಿಗಳ ಬಳಿ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಬಳಿಕ ರಾಜ್ಯ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಇದ್ದ ಹಲವು ಪ್ರಶ್ನೆಗಳು ಮೂಲ ಪ್ರಶ್ನೆಪತ್ರಿಕೆಯೊಂದಿಗೆ ಹೊಂದಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬೆಳವಣಿಗೆಯ ಬಳಿಕ ಪರೀಕ್ಷೆಯನ್ನು ನಡೆಸುವುದು ಸೂಕ್ತವಲ್ಲ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪರೀಕ್ಷಾ ಮಂಡಳಿಯ ತುರ್ತು ಕ್ರಮ

ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಅಭ್ಯರ್ಥಿಗಳ ವಿಶ್ವಾಸಕ್ಕೆ ಧಕ್ಕೆಯಾಗಬಾರದು ಎಂಬ ಕಾರಣದಿಂದ ಟಿಇಟಿ-2026 ಅನ್ನು ಮುಂದೂಡಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿ ಸ್ಪಷ್ಟಪಡಿಸಿದೆ. ಪ್ರಕರಣದ ಸಂಪೂರ್ಣ ತನಿಖೆ ಪೂರ್ಣಗೊಂಡ ಬಳಿಕ ಹೊಸ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ:

ತನಿಖೆ ಚುರುಕು

ಈ ಸಂಬಂಧ ಭಿವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡಿಜಿಟಲ್ ಸಾಧನಗಳು ಮತ್ತು ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಅಭ್ಯರ್ಥಿಗಳಿಗೆ ಮನವಿ

ಪರೀಕ್ಷೆಯ ಕುರಿತು ಹರಿದಾಡುತ್ತಿರುವ ವದಂತಿಗಳನ್ನು ನಂಬಬಾರದು ಎಂದು ಮಂಡಳಿ ಮನವಿ ಮಾಡಿದೆ. ಹೊಸ ಪರೀಕ್ಷಾ ದಿನಾಂಕ ಹಾಗೂ ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದು, ಅಕ್ರಮಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !