ಹೊಸದಿಗಂತ ವರದಿ, ಮಡಿಕೇರಿ:
ಕೊಡವ ಜನಾಂಗದ ಹಿರಿಯಣ್ಣನಂತಿರುವ ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷರಾಗಿ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ತಕ್ಕ ಮುಖ್ಯಸ್ಥ ಹಾಗೂ ದೇಶ ತಕ್ಕ ಕುಟುಂಬದವರಾದ ನಾಲಡಿ ಗ್ರಾಮದ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಖಿಲ ಕೊಡವ ಸಮಾಜದಲ್ಲಿ ಸುದೀರ್ಘ 49 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯಾದ ಮಾತಂಡ ಮೊಣ್ಣಪ್ಪ ಸ್ಥಾನಕ್ಕೆ ಈ ಆಯ್ಕೆ ನಡೆಯಿತು.
ವೀರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಸ್ವಾತಂತ್ರ್ಯ ಪೂರ್ವ 1942ರಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜದ ಬೈಲಾ ಪ್ರಕಾರ ದೇಶ ತಕ್ಕ ಕುಟುಂಬವರನ್ನೇ ಇಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂಬ ನಿಯಮದಡಿಯಲ್ಲಿ ಕಳೆದ 15 ದಿವಸದ ಹಿಂದೆ ನಡೆದ ಮಹಾಸಭೆಯಲ್ಲಿ ಇಬ್ಬರು ದೇಶ ತಕ್ಕ ಕುಟುಂಬದವರು ಉಪಸ್ಥಿತರಿದ್ದರು. ಈ ಸಂದರ್ಭ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಬೊಳ್ಳೇರ ವಿನಯ್ ಅಪ್ಪಯ್ಯ ಅಧ್ಯಕ್ಷ ಸ್ಥಾನಕ್ಕೆ ಆರ್ಹರು ಎನ್ನಲಾಗಿತ್ತು. ಮಹಾಸಭೆಯಲ್ಲಿ ಇವರಿಬ್ಬರನ್ನು ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಿ ಉಳಿದ ಒಂದಷ್ಟು ಜನರನ್ನು ಕೂಡಾ ಸಮಿತಿಗೆ ತಗೆದುಕೊಳ್ಳಲಾಯಿತು.
ಮಾತಂಡ ಮೊಣ್ಣಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರ ಹಸ್ತಾಂತರ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಾಗ, ದೇಶ ತಕ್ಕ ಕುಟುಂಬದ ಬೊಳ್ಳೇರ ವಿನಯ್ ಅಪಯ್ಯ ಎದ್ದು ನಿಂತು ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಹೆಸರನ್ನು ಸೂಚಿಸಿದರೆ ಮಂಡೇಪಂಡ ಸುಗುಣ ಮುತ್ತಣ್ಣ ಅನುಮೋದಿಸುವ ಮೂಲಕ ಅಖಿಲ ಕೊಡವ ಸಮಾಜದ ನೂತನ ಸಾರಥಿಯಾಗಿ ಪರದಂಡ ಸುಬ್ರಮಣಿ ಕಾವೇರಪ್ಪ ಅವಿರೋಧವಾಗಿ ಆಯ್ಕೆಯಾದರು.
ಮೂಲತಃ ನಾಲ್ಕು ನಾಡಿನ ನಾಲಡಿ ಗ್ರಾಮದವರಾದ ದಿವಂಗತ ಪರದಂಡ ಬಾಬು ಕಾವೇರಪ್ಪ ಹಾಗೂ ಪದ್ಮಿನಿ ಕಾವೇರಪ್ಪ ದಂಪತಿಯ ಪುತ್ರರಾಗಿರುವ ಸುಬ್ರಮಣಿ ಮಾನಸ ಗಂಗೋತ್ರಿಯಲ್ಲಿ ಎಂ.ಕಾಂ ಪದವಿ ಪಡೆದಿದ್ದಾರೆ. ಹಾಗೂ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.