ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಇಂದು ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಎರಡನೇ ದಿನ 1 ಚಿನ್ನ ಸೇರಿದಂತೆ 4 ಪದಕ ಗೆದ್ದಿದ್ದ ಭಾರತಕ್ಕೆ ಮೂರನೇ ದಿನ ಒಂದು ಕಂಚಿನ ಪದಕ ಸಿಕ್ಕಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಹೆಚ್ 1 ಫೈನಲ್ನಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ 211.1 ಅಂಕ ಸಂಪಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಎಂಟು ಮಹಿಳೆಯರ ನಡುವೆ ನಡೆದ ಈ ಫೈನಲ್ ಸುತ್ತಿನಲ್ಲಿ ರುಬಿನಾ ಬೆಳ್ಳಿ ಪದಕದ ರೇಸ್ನಲ್ಲಿದ್ದರು. ಆದರೆ ಕೊನೆಯ ಎರಡು ಶಾಟ್ಗಳಲ್ಲಿ ಲಯ ಕಳೆದುಕೊಂಡ ಅವರು ಒಟ್ಟು 211.1 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.
ರುಬಿನಾ ಫ್ರಾನ್ಸಿಸ್ ಗೆದ್ದ ಕಂಚಿನ ಪದಕ, ಶೂಟಿಂಗ್ನಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಪದಕ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಒಟ್ಟಾರೆ ಐದನೇ ಪದಕವಾಗಿದೆ. ಇದಕ್ಕೂ ಮೊದಲು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನ ಎರಡನೇ ದಿನ, ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಈವೆಂಟ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದರೆ, ಇದೇ ಈವೆಂಟ್ನಲ್ಲಿ ಮತ್ತೊರ್ವ ಭಾರತೀಯ ಸ್ಪರ್ಧಿ ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದಿದ್ದರು. ಆ ನಂತರ, ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ನಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದರು. ಉಳಿದಂತೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದುಕೊಟ್ಟಿದ್ದರು.