ಜೀವದ ಹಂಗು ತೊರೆದು ಸಿಯಾಚಿನ್‌ ರಕ್ಷಿಸಿದ ʼಪರಮವೀರʼನೀತ…

– ಗಣೇಶ ಭಟ್‌, ಗೋಪಿನಮರಿ

“Quartered in snow, silent to remain….
When the bugle calls, they shall rise and march again”

“ಇರಬೇಕು ಹಿಮದ ಹೊದಿಕೆ ಹೊದ್ದಂತಹ ಮೌನಸ್ಥಿತಿ…
ಕರ್ತವ್ಯದ ಕಹಳೆ ಮೊಳಗಿದೊಡನೆ ಮೈಕೊಡವಿ ಎದ್ದು ಪ್ರಾರಂಭಿಸಬೇಕು ಪಥಸಂಚಲನದ ಗತಿ”

ಸಿಯಾಚಿನ್‌ ಗ್ಲೇಸಿಯರ್‌ ನಲ್ಲಿರುವ ಭಾರತೀಯ ಸೇನೆಯ ಬೇಸ್‌ ಕ್ಯಾಂಪ್‌ ನಲ್ಲಿ ಬರೆದುಕೊಂಡಿರುವ ಹೆಮ್ಮೆಯ ವಾಕ್ಯವಿದು. ಸಿಯಾಚಿನ್‌ ಗ್ಲೇಸಿಯರ್…‌ ವಿಶ್ವದಲ್ಲಿಯೇ ಅತಿ ಎತ್ತರದ ರಣಭೂಮಿ. ಕಡಿದಾದ ಕಾರಾಕೋರಂ ಪರ್ವತ ಶ್ರೇಣಿಯಲ್ಲಿನ ಅತಿ ಕಡಿದಾದ ಪರ್ವತ ಪ್ರದೇಶಗಳಲ್ಲಿ ಸಿಯಾಚಿನ್‌ ಕೂಡ ಒಂದು. ಭೂಮಿಯ ಮೇಲಿನ ಅತಿ ದೊಡ್ಡ ಆಲ್ಪೈನ್ ಹಿಮಶ್ರೇಣಿ ಇದು. ರಕ್ಷಣೆಯ ವಿಷಯ ಬಂದಾಗ ಈ ಪ್ರದೇಶವು ಅತ್ಯಂತ ಆಯಕಟ್ಟಿನ ಸ್ಥಳ. ಅತ್ಯಂತ ಎತ್ತರದ ಸ್ಥಳವಾಗಿರುವುದರಿಂದ ಯುದ್ಧ ತಂತ್ರಗಾರಿಕೆಯ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದ್ದು ಶತ್ರುಗಳ ಮೇಲೆ ಕಣ್ಣಿಡಲು ಅತ್ಯಂತ ಸೂಕ್ತವಾದ ಸ್ಥಳ. ಆದರೆ ಇಲ್ಲಿ ಹೋರಾಡುವುದೆಂದರೆ ಸುಲಭದ ಮಾತಲ್ಲ. ಇಲ್ಲಿನ ಪೈಶಾಚಿಕ ವಾತಾವರಣದಲ್ಲಿ ತಿಂಗಳುಗಳ ಕಾಲ ಬದುಕುಳಿಯುವುದೇ ಪವಾಡ. ಸುಮಾರು ಎರಡು ಟ್ರಿಲಿಯನ್ ಘನ ಅಡಿಗಳಷ್ಟು ಮಂಜುಗಡ್ಡೆ, ಹಿಮದಿಂದ ಈ ಪ್ರದೇಶ ಆವೃತವಾಗಿದೆ. ಪ್ರಪಂಚದ ಇತಿಹಾಸದಲ್ಲಿಯೇ ಅತಿ ಕಡಿಮೆ ತಾಪಮಾನ ಹೊಂದಿರುವ ರಣರಂಗವೆಂದರೆ ಅದು ಸಿಯಾಚಿನ್‌ ಗ್ಲೇಸಿಯರ್.‌ ಕೆಲವೊಮ್ಮೆ ಇಲ್ಲಿನ ತಾಪಮಾನ -52 ಡಿಗ್ರಿ ಸೆಲ್ಸಿಯಸ್‌ ವರೆಗೂ ತಲುಪುತ್ತದೆ. ಇಂಥಹ ಭೀಕರ ರಣಭೂಮಿಯಲ್ಲಿ ಭಾರತ ಹಾಗು ಪಾಕಿಸ್ತಾನಿ ಸೈನ್ಯವು ದಶಕಗಳಿಂದ ಹೋರಾಡುತ್ತಿವೆ. ಆದರೆ ಸಿಯಾಚಿನ್‌ ಪ್ರದೇಶದ ಮೇಲೆ ಪಾರಮ್ಯವಿರುವುದು ಭಾರತೀಯ ಸೇನೆಯದ್ದೇ. ಸಿಯಾಚಿನ್‌ ಗ್ಲೇಸಿಯರ್‌ 1987ರ ಸಮಯದಲ್ಲಿ ಶತ್ರುಗಳ ಕೈವಶವಾಗುತ್ತಿದ್ದ ಸಂದರ್ಭದಲ್ಲಿ ಅದು ಪುನಃ ಭಾರತೀಯ ಸೇನೆಯ ಕೈ ವಶವಾಗಿದುದರ ಹಿಂದೆ ರೋಚಕ ಕಥೆಯೊಂದಿದೆ, ಜೀವದ ಹಂಗು ತೊರೆದು ಹೋರಾಡಿ ವಿಜಯ ಸಾಧಿಸುವಂತೆ ಮಾಡಿದ ಪರಮ ವೀರನೊಬ್ಬ ಸಾಹಸವಿದೆ.

1970ರ ಸಮಯದಲ್ಲಿ ಪಾಕಿಸ್ತಾನಿ ಸರ್ಕಾರವು ಸಿಯಾಚಿನ್‌ ಪ್ರದೇಶದಲ್ಲಿ ವಿದೇಶಿ ಚಾರಣಿಗರಿಗೆ ಚಾರಣ ಮಾಡಲು ಅನುಮತಿ ನೀಡಲು ಪ್ರಾರಂಭಿಸಿತ್ತು. ಆ ಮೂಲಕ ಈ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ್ದು ಎಂಬುದನ್ನು ಬಿಂಬಿಸಹೊರಟಿತ್ತು. 1980ರ ಹೊತ್ತಿಗೆ ಈ ಪ್ರದೇಶವನ್ನು ತನ್ನದೆಂದು ಅದು ಹಕ್ಕು ಚಲಾಯಿಸಲು ಆರಂಭಿಸಿತ್ತು. ಆ ಮೂಲಕ ಸಿಯಾಚಿನ್‌ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿ ಸಂಪೂರ್ಣ ಕಾರಾಕೋರಂ ಪ್ರದೇಶವನ್ನು ನಿಯಂತ್ರಿಸುವ ಮತ್ತು ಲಡಾಖ್‌ ಪ್ರದೇಶಕ್ಕೆ ಬೆದರಿಕೆಯೊಡ್ಡುವ ಪಾಕ್-ಚೀನಾ ಕಾರಿಡಾರ್ ರಚಿಸುವ ಉದ್ದೇಶ ಅದರದ್ದಾಗಿತ್ತು. ಆದರೆ ಭಾರತದ ಗುಪ್ತಚರ ಇಲಾಖೆಗೆ ಈ ಸುಳಿವು ಸಿಕ್ಕಿತ್ತು. ಪಾಕಿಸ್ತಾನಿ ಸರ್ಕಾರವು ವಿಶೇಷ ಪರ್ವತ ಉಡುಪುಗಳನ್ನು ಖರೀದಿಸುವ ಬೃಹತ್‌ ಆರ್ಡರ್‌ ಒಂದನ್ನುಇಂಗ್ಲೆಂಡಿಗೆ ನೀಡಿತ್ತು. ಇದರ ಜಾಡು ಬೆಂಬತ್ತಿದ ಭಾರತದ ಗುಪ್ತಚರ ಇಲಾಖೆಗೆ ಪಾಕಿಸ್ತಾನದ ಯೋಜನೆ ತಿಳಿದು ಕೂಡಲೇ ಈ ಪ್ರದೇಶಕ್ಕೆ ಸೈನ್ಯವನ್ನು ಕಳುಹಿಸಿ ಸಿಯಾಚಿನ್‌ ಸುತ್ತಲಿನ ಪರ್ವತಗಳ ಮೇಲೆ ಭಾರತ ನಿಯಂತ್ರಣ ಸಾಧಿಸಿತು.

ಇದಾಗಿ ಮೂರು ವರ್ಷಗಳು ಕಳೆದಿದ್ದವು. ಭಾರತವು ಈಶಾನ್ಯದ ಟಿಬೇಟಿನಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಆ ಸಂದರ್ಭದ ಲಾಭ ಪಡೆಯಲು ಯೋಚಿಸಿದ ಪಾಕ್‌ ಕುತಂತ್ರವೊಂದನ್ನು ರೂಪಿಸಿತು. ಸಿಯಾಚಿನ್‌ ಪ್ರದೇಶದಲ್ಲಿ ಪಾಕ್‌ ಸೈನಿಕರು ರಹಸ್ಯವಾಗಿ ಒಳನುಸುಳಿದರು. ಅಲ್ಲಿನ ಎತ್ತರದ ಪ್ರದೇಶವೊಂದರಲ್ಲಿ ತಮ್ಮ ಪೋಸ್ಟ್‌ ಒಂದನ್ನು ಸ್ಥಾಪಿಸಿ ಅದಕ್ಕೆ ಜಿನ್ನಾ ಹೆಸರಿನಲ್ಲಿ ʼಕ್ವೈದ್-ಎ-ಅಜಮ್ʼ ಅಂತ ಹೆಸರನ್ನೂ ಇಟ್ಟುಬಿಟ್ಟಿತು ಪಾಕ್.‌ ಆ ಜಾಗ ಹೇಗಿತ್ತೆಂದರೆ ಅಲ್ಲಿಂದ ಭಾರತೀಯ ಪಡೆಗಳ ಚಲನವಲನಗಳು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಅಲ್ಲೊಬ್ಬ ಸ್ನೈಪರ್‌ ಹಿಡಿದು ಕುಳಿತರೆ ಇಡೀ ಭಾರತೀಯ ಪೋಸ್ಟ್‌ ಮೇಲೆ ದಾಳಿ ನಡೆಸಬಹುದಾಗಿತ್ತು. ಭಾರತೀಯ ಪಡೆಗಳ ಸರಬರಾಜು ಮಾರ್ಗಗಳ ಮೇಲೆ ನಿರಾಯಾಸವಾಗಿ ಫಿರಂಗಿಗಳಿಂದ ದಾಳಿ ನಡೆಸಬಹುದಾಗಿತ್ತು. 1987ರ ಮೇ ತಿಂಗಳಲ್ಲಿ ಈ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಲೆಫ್ಟಿನೆಂಟ್ ರಾಜೀವ್ ಪಾಂಡೆ ನೇತೃತ್ವದ ಭಾರತೀಯ ಪಡೆಯಲ್ಲಿ ಒಂಬತ್ತು ಸೈನಿಕರು ಪಾಕಿಸ್ತಾನಿ ಪಡೆಗಳ ಗುಂಡೇಟಿಗೆ ಹುತಾತ್ಮರಾಗಿ ಹೋದರು. ಕೇವಲ ಮೂವರು ಸೈನಿಕರು ಮಾತ್ರ ಬದುಕುಳಿದಿದ್ದರು.

ಒಂದು ತಿಂಗಳ ನಂತರ ಜೆ&ಕೆ ಲೈಟ್‌ ಇನ್ಫಂಟ್ರಿಯ ಮೇಜರ್ ವರೀಂದರ್ ಸಿಂಗ್ ಅವರಿಗೆ ಈ ʼಕ್ವೈದ್ʼ ಪೋಸ್ಟ್‌ ಅನ್ನು ಮರುವಶಪಡಿಸಿಕೊಳ್ಳುವ ಜವಾಬ್ದಾರಿ ವಹಿಸಲಾಯಿತು. 21 ಸಾವಿರ ಅಡಿಗಳ ಎತ್ತರದಲ್ಲಿ ಕೊರೆವ ಚಳಿಯಲ್ಲಿ 457 ಮೀಟರ್‌ ಎತ್ತರವಾಗಿದ್ದ ಹಿಮದ ಗೋಡೆಗಳನ್ನೇರಿ ಶತ್ರುಗಳನ್ನು ಮಟ್ಟಹಾಕಬೇಕಿತ್ತು. ಇದೊಂದು ರೀತಿಯಲ್ಲಿ ʼಮಾಡು ಇಲ್ಲವೇ ಮಡಿʼ ಮಿಷನ್‌ ಆಗಿತ್ತು. ಹವಾಮಾನ ಪರಿಸ್ಥಿತಿಗಳು ತುಂಬಾ ಕೆಟ್ಟದಾಗಿದ್ದವು. ಗೋಚರತೆ ಶೂನ್ಯವಾಗಿತ್ತು. ಎರಡು ಚಿಕ್ಕ ಪಾರ್ಟಿಯನ್ನು ಮೊದಲು ಕಳುಹಿಸಲಾಯಿತಾದರೂ ಅವರು ʼಕ್ವೈದ್‌ʼ ಪೋಸ್ಟಿನಲ್ಲಿ ಭದ್ರವಾಗಿ ಕೂತಿದ್ದ ಶತ್ರುವಿನ ದಾಳಿಗೆ ತತ್ತರವಾಗಿ ಸಂಪರ್ಕ ಕಳೆದುಕೊಂಡರು.

ಆಗ ವರೀದಂರ್‌ ಸಿಂಗ್‌ ಆಯ್ಕೆ ಮಾಡಿದ್ದು ʼನಾಯಬ್‌ ಸುಬೇದಾರ್‌ ಬಾನಾ ಸಿಂಗ್‌ʼ ಅವರನ್ನು. ಬಾನಾ ಸಿಂಗ್‌ ನೇತೃತ್ವದಲ್ಲಿ ಮತ್ತೊಂದು ಪಡೆಯನ್ನು ಕಳುಹಿಸಲಾಯಿತು. ಐವರು ಒಡನಾಡಿಗಳೊಂದಿಗೆ ಶತ್ರುವನ್ನು ಗೆಲ್ಲಲು ಹೊರಟ ಬಾನಾ ಸಿಂಗ್‌ ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಮುಂದುವರೆದ ಅವರಿಗೆ 9 ಜನ ಸಹಚರರ ಮೃತದೇಹಗಳು ಎದುರಾದವು. ಅದನ್ನು ನೋಡಿ ಎದೆಗುಂದದೇ ತಮ್ಮ ಸಹಚರರನ್ನು ಹುರಿದುಂಬಿಸಿದ ಬಾನಾ ಸಿಂಗ್‌ ಹಿಮಗೋಡೆ ಏರಲು ಪ್ರಾರಂಭಿಸಿದರು. 90 ಡಿಗ್ರಿಯಷ್ಟು ಲಂಬವಾಗಿದ್ದ ಆ ಗೋಡೆ ಏರುವುದು ಸುಲಭವಂತೂ ಆಗಿರಲಿಲ್ಲ. ಮೈ ಕೊರೆವ ಚಳಿ ದೇಹವನ್ನು ಹೆಪ್ಪುಗಟ್ಟಿಸುತ್ತಿತ್ತು. ದೃಢನಿಶ್ಚಯದಿಂದ ಮುಂದುವರೆದ ಬಾನಾ ಸಿಂಗ್‌ ಶತ್ರುವಿಗೆ ಸುಳಿವು ಕೊಡದೇ ಮುಂದುವರೆದರು. ಅಂತೂ ಮೇಲ್ಭಾಗದ ಬಂಕರ್‌ ತಲುಪುವ ಹೊತ್ತಿಗೆ ಅವರ ದೇಹ ಹೈರಾಣಾಗಿತ್ತು. ಆದರೆ ನಿಲ್ಲದ ಬಾನಾ ಸಿಂಗ್‌ ಶತ್ರುಗಳ ಪ್ರತಿ ಬಂಕರಿನ ಮೇಲೆಯೂ ದಾಳಿ ನಡೆಸಿದರು. ಶತ್ರುಗಳ ಮೇಲೆ ಗ್ರೆನೇಡ್‌ಗಳನ್ನು ಎಸೆಯುತ್ತ ಗುಂಡಿನ ಮಳೆಗರೆದರು. ದಾಳಿಗೆ ಹೆದರಿದ ಪಾಕಿಸ್ತಾನಿಗಳು ಬಂಕರ್‌ ಒಳಹೊಕ್ಕು ಬಾಗಿಲು ಹಾಕುವುದರಲ್ಲಿದ್ದರು, ಅಷ್ಟರಲ್ಲಿ ಚಾಕಚಕ್ಯತೆಯಿಂದ ಬಂಕರ್‌ ಒಳಗೆ ಗ್ರೆನೇಡ್‌ ಎಸೆಯುವಲ್ಲಿ ಬಾನಾ ಸಿಂಗ್‌ ಸಫಲರಾದರು. ಪರಿಣಾಮ ಬಂಕರ್‌ ಒಳಹೊಕ್ಕಿದ್ದ ಆರು ಪಾಕಿಸ್ತಾನಿಗಳು ಸತ್ತು ಬಿದ್ದಿದ್ದರು. ʼಕ್ವೈದ್‌ʼ ಪೋಸ್ಟ್‌ ನಮ್ಮ ಕೈ ವಶವಾಯಿತು. ಬಾನಾ ಸಿಂಗ್‌ ತೋರಿದ ಈ ಅಪ್ರತಿಮ ಸಾಹಸದಿಂದ ಇಂದಿಗೂ ಆಯಕಟ್ಟಿನ ಸ್ಥಳ ʼಸಿಯಾಚಿನ್‌ʼ ಭಾರತದ ಹಿಡಿತದಲ್ಲಿದೆ. ಅವರ ಸಾಹಸದ ಪ್ರತೀಕವಾಗಿ ಆ ಪೋಸ್ಟ್‌ ಗೆ ʼಬಾನಾ ಟಾಪ್‌ʼ ಎಂದು ಮರುನಾಮಕರಣ ಮಾಡಲಾಗಿದೆ.

ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಅಪ್ರತಿಮ ಶೌರ್ಯ ಮತ್ತು ಸಾಹಸವನ್ನು ಪ್ರದರ್ಶಿಸಿದ್ದಕ್ಕಾಗಿ, ನಾಯಬ್ ಸುಬೇದಾರ್ ಬಾನಾ ಸಿಂಗ್ ಅವರಿಗೆ ಪರಮ ವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!