ಪರಶುರಾಮ ಪ್ರತಿಮೆ ನಿರ್ಮಾಣ ವಿವಾದ: ಶಿಲ್ಪಿ ಕೃಷ್ಣ ನಾಯಕ್ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಪ್ರತಿಮೆ ಕಳವು ಕುರಿತಂತೆ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಕಾರ್ಕಳ ನಗರ ಠಾಣೆ ಪೊಲೀಸರು ಆರೋಪಿ ಕೃಷ್ಣ ನಾಯಕ್ ಅವರನ್ನು ಕೇರಳದ ಕ್ಯಾಲಿಕಟ್‌ನಲ್ಲಿ ಭಾನುವಾರ ಬಂಧಿಸಿದ್ದಾರೆ.

ಬೆಂಗಳೂರು ಕ್ರಿಷ್ ಆರ್ಟ್ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್ ಎಂಬವರು ಪರಶುರಾಮನ ಕಂಚಿನ ವಿಗ್ರಹವನ್ನು ನಿರ್ಮಿಸಿಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂ. ಹಣ ಪಡೆದುಕೊಂಡಿದ್ದರು. ಬಳಿಕ ಆತ ಕಂಚಿನ ವಿಗ್ರಹ ತಯಾರಿಸದೆ, ನಕಲಿ ವಿಗ್ರಹವನ್ನು ಸಿದ್ದಪಡಿಸಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಬಜಗೋಳಿಯ ಕೃಷ್ಣ ಶೆಟ್ಟಿ ಎಂಬವರು ಪರಶುರಾಮನ ಪ್ರತಿಮೆ ಕಳುವಾಗಿದೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಶಿಲ್ಪಿಯ ಕೃಷ್ಣ ನಾಯಕ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತ ಎಫ್‌ಐಆರ್ ದಾಖಲಾದ ಬಳಿಕ ಬಂಧನದ ಭೀತಿಯಲ್ಲಿದ್ದ ಕೃಷ್ಣ ನಾಯಕ್ ನಿರೀಕ್ಷಣಾ ಜಾಮೀನು ಕೋರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ನ.7 ನಿರೀಕ್ಷಣಾ ಜಾಮೀನು ರದ್ದು ಆದೇಶ ಪ್ರಕಟಿಸಿದೆ. ಇತ್ತ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಆರೋಪಿ ಕೃಷ್ಣ ನಾಯ್ಕ ಬಂಧನ ಭೀತಿಯಿಂದ ಪರಾರಿಯಾಗಿದ್ದರು. ಆರೋಪಿಯ ಜಾಡು ಬೆನ್ನತ್ತಿದ ಕಾರ್ಕಳ ಪೊಲೀಸರು ಕೇರಳದ ಕ್ಯಾಲಿಕಟ್ ಎಂಬಲ್ಲಿ ಕೃಷ್ಣ ನಾಯಕ್‌ನನ್ನು ಬಂಧಿಸಿ ಕಾರ್ಕಳಕ್ಕೆ ಕರೆ ತರುತ್ತಿದ್ದಾರೆ.

ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು ಈ ಮೂರ್ತಿ ವಿಚಾರದಲ್ಲಿ ಇನ್ನಷ್ಟು ಮಾಹಿತಿ ಲಭ್ಯ ಆಗಬೇಕಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!