CHILDREN’s CARE| ಪೋಷಕರೇ ಈ ಅಂಶ ನೀವು ತಿಳಿದಿರುವಿರಾ…?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೋಷಕರಾದವರು ಸರಿಯಾದ ರೀತಿಯಲ್ಲಿ ತಮ್ಮ ಮಕ್ಕಳನ್ನು ಪೋಷಣೆ ಮಾಡುತ್ತಿದ್ದಾರೆಯೇ? ಈ ಅಂಶವನ್ನು ಗಂಭೀರವಾಗಿ ತಮಗೆ ತಾವೇ ಪ್ರಶ್ನಿಸಬೇಕಾಗುತ್ತದೆ. ಮಕ್ಕಳ ಪೋಷಣೆ ಎಂಬುದು ಸಣ್ಣ ವಿಷಯವಲ್ಲ. ಪ್ರತಿ ದಿನವೂ , ಅನುಕ್ಷಣವೂ ಈ ವಿಚಾರದಲ್ಲಿ ಕಲಿಯುವಿಕೆ ಇದೆ. ಜೀವನದಲ್ಲಿ ಈ ಅಂಶಗಳನ್ನು ಅಳವಡಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಮುಂದೊಂದು ದಿನ ಪಶ್ಚಾತ್ತಾಪ ಪಡುವುದು ತಪ್ಪುತ್ತದೆ.

ನೀವು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಬದಲಾಗಿ ಮಕ್ಕಳನ್ನು ಆಸ್ತಿಯನ್ನಾಗಿ ಪರಿವರ್ತಿಸಿ. ಇದು ನೀವು ಮಾಡುವ ದೊಡ್ಡ ಪೋಷಣೆ. ಕಾರಣ ಇಷ್ಟೇ. ನನ್ನ ಮಕ್ಕಳಿಗೆ ನನ್ನ ಮೊಮ್ಮಕ್ಕಳಿಗೆ ಎಂದು ಆಸ್ತಿ ಹಣ ಅಂತಸ್ತನ್ನು ಒಟ್ಟುಹಾಕುವುದರಲ್ಲಿಯೇ ದಿನಪೂರ್ತಿ, ಜೀವನ ಪೂರ್ತಿ ನೀವು ಕಳೆಯುತ್ತಿದ್ದರೆ ನಿಮ್ಮ ಮಕ್ಕಳ ಪಾಲನೆ, ಕಾಳಜಿ ಖಂಡಿತವಾಗಿಯೂ ನಿಮಗೆ ಅಸಾಧ್ಯವಾಗುತ್ತದೆ. ಇದಕ್ಕೆ ಸಮಯ ಹೊಂದಾಣಿಕೆ ಮಾಡಲು ಅವಕಾಶವೇ ಇಲ್ಲದಾಗುತ್ತದೆ. ಇದರಿಂದಾಗಿ ನಿಮ್ಮ ಮಕ್ಕಳು ಯಾಂತ್ರಿಕೃತ ಜೀವನ ನಡೆಸಲು ಪರೋಕ್ಷವಾಗಿ ನೀವೇ ಕಾರಣರಾಗುತ್ತೀರಿ. ಅನೇಕ ಮನೆಗಳಲ್ಲಿ ಈ ವಾತವಾರಣವಿರುತ್ತದೆ ಇದರಿಂದಾಗಿ ಮಕ್ಕಳು ಪೋಷಕರ ಹಿಡಿತಕ್ಕೆ ಸಿಗದೇ ಬೆಳೆಯುತ್ತಾರೆ. ಮುಂದೆ ಪಶ್ಚಾತ್ತಾಪ ಪಡುವ ಸ್ಥಿತಿ ನಿರ್ಮಾಣವಾಗುತ್ತದೆ.

ಮನೆಯಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಸುವುದು ಅತೀ ಅಗತ್ಯ. ಮಕ್ಕಳು ಉತ್ತಮ ವಾತಾವರಣದಲ್ಲಿದ್ದರೆ ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣವೂ ಅತೀ ಮುಖ್ಯವಾಗಿ ಬೇಕಾಗುತ್ತದೆ. ಹಣವನ್ನು ನೀಡಿ ಮಕ್ಕಳ ಪ್ರೀತಿಯನ್ನು ಗೆಲ್ಲಬೇಡಿ. ಬದಲಾಗಿ ಪ್ರೀತಿಯಿಂದ ಮಕ್ಕಳ ಮನಸ್ಸನ್ನು ಗೆಲ್ಲಿ. ಇದು ಶಾಶ್ವತವಾಗಿ ಉಳಿಯುವಂತಹುದು. ಅವರ ಸಂತೋಷದಲ್ಲಿ ನಿಮ್ಮ ಸಂತೋಷವನ್ನು ಕಾಣುವಂತಾಗಿ. ಇದರಿಂದ ಮಕ್ಕಳು ಆನಂದದ ವಾತಾವರಣದಲ್ಲಿ ಬೆಳೆಯುವಂತಾಗುತ್ತದೆ.

ʻnó (ನೋ) ಎಂಬುದನ್ನು ದಿನಕ್ಕೆ ಎಷ್ಟು ಬಾರಿ ನಮಗರಿವಿಲ್ಲದಂತೆ ನಾವು ಮಕ್ಕಳ ಮೇಲೆ ಪ್ರಯೋಗ ಮಾಡುತ್ತೇವೆ. ಒಂದು ಬಾರಿ ಗಂಭೀರವಾಗಿ ಯೋಚಿಸಿ. ಕನಿಷ್ಟ ಐವತ್ತರಿಂದ ನೂರು ಬಾರಿ ಪ್ರತಿನಿತ್ಯ ನಾವು ನೋ ಅಥವಾ ಬೇಡ ಎಂಬ ಪದವನ್ನು ಮಕ್ಕಳಿಗೆ ಪ್ರಯೋಗಿಸುತ್ತಲೇ ಇರುತ್ತೇವೆ. ಇದರಿಂದಾಗಿ ಮಕ್ಕಳ ಮಾನಸಿಕ ಬೆಳವಣಿಗೆಗೆ ತೀವ್ರ ಹೊಡೆತವುಂಟಾಗುತ್ತದೆ. ಬದಲಾಗಿ ಪ್ರೀತಿಯಿಂದ ಮನಸ್ಸನ್ನು ಬದಲು ಮಾಡುವ ಪ್ರಯತ್ನ ಮಾಡಿ. ಬೇಡ ಅಥವಾ ನೋ ಎಂಬ ಪದ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತಾ ಬನ್ನಿ. ನಿಮ್ಮ ಮಕ್ಕಳ ಬೆಳವಣಿಗೆ ಅಷ್ಟೇ ಖುಷಿಯಿಂದ ವೇಗವಾಗಿ ಆಗುತ್ತಿರುವುದನ್ನು ಗಮನಿಸಿ.

ಮಕ್ಕಳನ್ನು ಅತಿಯಾಗಿ ಮುದ್ದುಮಾಡುವುದು ಸಹ ಉತ್ತಮ ಬೆಳವಣಿಗೆಯಲ್ಲ. ಮಕ್ಕಳ ತಪ್ಪುಗಳನ್ನು ತಿದ್ದಿ, ಸರಿಯಾದ ದಾರಿಗೆ ಕೊಂಡೊಯ್ಯುವ ಜವಾಬ್ದಾರಿ ಪೋಷಕರದ್ದು. ಹೊಡೆದು ಬಡಿದು ಬುದ್ದಿ ಕಲಿಸುವುದು ಉತ್ತಮವಲ್ಲ. ಪ್ರೀತಿಯಿಂದ ವಾಸ್ತವಾಂಶವನ್ನು ತಿಳಿಸಿ ಅವರ ಮನಪರಿವರ್ತನೆಯಾಗುವ ರೀತಿಯಲ್ಲಿ ಬೆಳೆಸುವ ಚಾಕಚಕ್ಯತೆಯನ್ನು ರೂಢಿಸುವುದು ಉತ್ತಮ. ಅತಿಯಾಗಿ ಮುದ್ದು ಮಾಡಿ, ಮಕ್ಕಳು ಮಾಡಿದ್ದೆಲ್ಲವೂ ಸರಿ ಎಂಬ ಮನೋಭವಾವೂ ಹಾನಿಕಾರಕ. ಇದರಿಂದ ಮಕ್ಕಳು ಹಾದಿತಪ್ಪುವ ಸಾಧ್ಯತೆಗಳು ಅಧಿಕವಾಗಿರುತ್ತವೆ.

ತನ್ನ ಮಗು ದೊಡ್ಡ ಹೆಸರುಮಾಡಬೇಕೆಂಬ ಹಂಬಲ ಪ್ರತಿಯೊಬ್ಬ ಪೋಷಕರಿಗೂ ಇದ್ದೇ ಇರುತ್ತದೆ. ಮಗುವಿನ ಶಕ್ತಿಗೂ ಮೀರಿ ಒತ್ತಡ ಹೇರುವ ಪ್ರವೃತ್ತಿ ಇಂದು ಪೋಷಕರಿಂದಾಗುತ್ತಿದೆ. ಇದರಿಂದಾಗಿ ಮಾನಸಿಕ ಒತ್ತಡಕ್ಕೆ ಮಕ್ಕಳು ಒಳಗಾಗುತ್ತಿದ್ದಾರೆ. ನೈಜ ಬೆಳವಣಿಗೆಯ ಮೂಲಕ ಮಕ್ಕಳ ಪ್ರತಿಭೆ ಪ್ರಕಾಶಿಸಲು ಅವಕಾಶ ನೀಡಿ. ಒತ್ತಡದ ಬೆಳವಣಿಗೆಯ ಮೂಲಕ ಪ್ರತಿಭೆ ಅನಾವರಣ ಒಳ್ಳೆಯದಲ್ಲ.

ಸ್ವತಂತ್ರವಾಗಿ ಮಗುವನ್ನು ಬೆಳೆಯುವಂತೆ ನೋಡಿಕೊಳ್ಳಿ. ಪ್ರತಿಯೊಂದಕ್ಕೂ ನಿರ್ಬಂಧ ಹೇರದೆ ವಿಶಾಲ ದೃಷ್ಟಿಕೋನದಿಂದ ಚಿಂತಿಸುವಂತೆ ಪ್ರೇರೇಪಿಸಿ. ಮಕ್ಕಳ ಮೇಲೆ ಸಿಡುಕುತನದ ಪ್ರವೃತ್ತಿ ಸಲ್ಲದು. ಬದಲಾಗಿ ಧನಾತ್ಮಕ ವಿಚಾರಗಳನ್ನು ಚರ್ಚಿಸಿ, ಶೌರ್ಯ, ಸಾಹಸಗಳ ಬಗ್ಗೆ ತಿಳಿಸಿ, ದೇಶ, ಸಂಸ್ಕೃತಿ, ಸಂಸ್ಕಾರಗಳ ವಿಚಾರಗಳನ್ನು ಎಳೆ ಎಳೆಯಾಗಿ ನಿರಂತರ ಹೇಳುತ್ತಾ ಬನ್ನಿ. ಮಕ್ಕಳ ಮುಂದೆ ಕೋಪ, ದ್ವೇಷಗುಣಗಳನ್ನು ಪ್ರದರ್ಶಿಸದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!