ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ಅಧಿಕೃತವಾಗಿ ಆರಂಭವಾಗಿದ್ದು, ಪ್ರಪಂಚದಾದ್ಯಂತದ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.ಈ ಕ್ಷಣ ತಮ್ಮ ದೇಶವನ್ನು ಪ್ರತಿಬಿಂಬಿಸುವಂಥ ಸಮವಸ್ತ್ರವನ್ನು ಧರಿಸಿದ್ದರು.
ಭಾರತದ ಅಥ್ಲೀಟ್‌ಗಳು ಕೂಡ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ದೇಶದ ಪ್ರಖ್ಯಾತ ಡಿಸೈನರ್‌ಗಳಲ್ಲಿ ಒಬ್ಬರಾದ ತರುಣ್ ತಹಲಿಯಾನಿ ವಿನ್ಯಾಸ ಮಾಡಿದ್ದ ಡ್ರೆಸ್‌ಗಳನ್ನು ಧರಿಸಿದ್ದರು. ಆದರೆ, ಅವರು ವಿನ್ಯಾಸ ಮಾಡಿದ ಡ್ರೆಸ್‌ಗಳು ನೆಟ್ಟಿಗರಿಗೆ ಇಷ್ಟವಾಗಲಿಲ್ಲ. ಇದು ಶ್ರೀಮಂತ ಜವಳಿ ಸಂಸ್ಕೃತಿಯನ್ನು ಹೊಂದಿರುವ ಭಾರತಕ್ಕೆ ಸೂಕ್ತವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತರುಣ್ ತಹಿಲಿಯಾನಿ ಅವರು ಒಲಂಪಿಕ್ 2024 ರ ಬಟ್ಟೆಗಳನ್ನು ‘ಕಳಪೆಯಾಗಿ’ ವಿನ್ಯಾಸಗೊಳಿಸಿದ್ದಕ್ಕಾಗಿ ಅಂತರ್ಜಾಲದಾದ್ಯಂತ ಟ್ರೋಲ್ ಆಗಗುತ್ತಿದ್ದಾರೆ.
ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಇತರ ಸಣ್ಣಪುಟ್ಟ ದೇಶಗಳು ವೈಬ್ರಂಟ್ ಆಗಿರುವ ಫ್ಯಾಶನೇಬಲ್ ಆಗಿರುವ ಔಟ್‌ಫಿಟ್ ಧರಿಸಿದ್ದರೆ, ಟೀಮ್ ಇಂಡಿಯಾದ ಔಟ್‌ಫಿಟ್ ಸಿಂಪಲ್ ಆಗಿರುವ ಕುರ್ತಾ ಸೆಟ್ ಆಗಿತ್ತು. ಅವುಗಳ ಮೇಲೆ ಡಿಜಿಟಲ್ ಪ್ರಿಂಟ್‌ಗಳು ಹಾಗೂ ತ್ರಿವರ್ಣ ಧ್ವಜದ ಬಣ್ಣಗಳನ್ನು ಹಾಕಲಾಗಿತ್ತು ಎಂದು ಟೀಕೆ ಮಾಡಿದ್ದಾರೆ. ಇನ್ನೂ ಹಲವರು ಇದನ್ನು ಯಾವುದೇ ಕಾರಣಕ್ಕೂ ಡಿಸೈನ್ ಮಾಡಿದ ಸೀರೆಗಳು ಎನ್ನಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ತರುಣ್ ತಹಲಿಯಾನಿ ಈ ಡ್ರೆಸ್‌ಗಳನ್ನು ತಸ್ವಾದ ಕೊಲಾಬ್ರೇಷನ್‌ನೊಂದಿಗೆ ಸಿದ್ಧಮಾಡಿದ್ದಾರೆ. ಔಟ್‌ಫಿಟ್‌ಅನ್ನು ಅನಾವರಣ ಮಾಡುವ ವೇಳೆ, ಈ ಡ್ರೆಸ್ ಹೇಗೆ ಸಾಂಪ್ರದಾಯಿಕತೆ ಹಾಗೂ ಆಧುನಿಕತೆಯ ಮಿಶ್ರಣವಾಗಿದೆ ಅನ್ನೋದನ್ನು ತಿಳಿಸಿತ್ತು. ಇದು ದೇಶದ ಅತ್ಯಂತ ಸಾಂಪ್ರದಾಯಿಕ ಭಾರತೀಯ ಚಿಹ್ನೆಯಾದ ತ್ರಿವರ್ಣ ಧ್ವಜದಿಂದ ಪ್ರೇರಿತವಾಗಿದೆ ಎಂದು ಮಾಹಿತಿ ನೀಡಿತ್ತು.
ಈ ಬಟ್ಟೆಗಳು ಅದರಲ್ಲಿ ನೇಯ್ದ ಪ್ರತಿಯೊಂದು ಎಳೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತವೆ. ಅದುವೇ ರಾಷ್ಟ್ರೀಯ ಪ್ರಾತಿನಿಧ್ಯ. ಇತರ ದೇಶಗಳಿಗೆ ಹೋಲಿಸಿದರೆ ವೀಕ್ಷಕರು ಬಣ್ಣಗಳು, ಟ್ರೆಂಡ್ ಮತ್ತು ಫ್ಯಾಷನ್‌ಗಳ ಮಿಶ್ರಣವನ್ನು ನಿರೀಕ್ಷಿಸಿದ್ದಾರೆ. ಆದರೆ, ತರುಣ್ ಮತ್ತು ತಸ್ವಾ ಇದನ್ನು ಸಾಂಪ್ರದಾಯಿಕ ಮತ್ತು ಕನಿಷ್ಠವಾಗಿ ಇರಿಸಿದ್ದರು.
ಅಂಬಾನಿ ಮದುವೆ ಎನ್ನುವ ವಿಚಾರ ಬಂದಾಗ ನೀವು ಮಾಸ್ಟರ್‌ಪೀಸ್ ಆದ ಡ್ರೆಸ್‌ಗಳ ವಿನ್ಯಾಸ ಮಾಡುತ್ತೀರಿ. ದೇಶದ ವಿಚಾರ ಬಂದಾಗ ಇಂಥ ಕೆಟ್ಟ ವಿನ್ಯಾಸದ ಡ್ರೆಸ್ ಮಾಡುತ್ತೀರಿ ಎಂದು ಟೀಕೆ ಮಾಡಿದ್ದಾರೆ.
ಹಲೋ ತರುಣ್ ತಹಲಿಯಾನಿ, ಇದಕ್ಕಿಂತ ಮುಂಬೈನ ಬೀದಿಗಳಲ್ಲಿ ಬರೀ 200 ರೂಪಾಯಿಗೆ ನಾನು ಒಳ್ಳೆಯ ಸೀರೆಗಳನ್ನು ನೋಡಿದ್ದೇನೆ. ಆದರೆ, ನೀವು ಡಿಸೈನ್ ಮಾಡಿದ್ದು ಸಮಾರಂಭಕ್ಕೆ ಧರಿಸುವ ಸೀರೆಗಳಾಗಿರಲಿಲ್ಲ. ಚೀಪ್ ಪಾಲಿಸ್ಟರ್‌ಗಳನ್ನು ಫ್ಯಾಬ್ರಿಕ್ ಆಗಿ ಯೂಸ್ ಮಾಡಿ ಅದನ್ನು ಪ್ರಿಂಟ್ ಮಾಡಿದ್ದೀರಿ. ಯಾವುದೇ ಯೋಚನೆಗಳಿಲ್ಲದೆ, ಮೂರು ಬಣ್ಣವನ್ನು ಸೀರೆಯ ಮೇಲೆ ಎರಚಿದ್ದೀರಿ. ಇನ್ನೇನು ಡೆಡ್‌ಲೈನ್‌ಗೆ ಮೂರು ನಿಮಿಷ ಇರೋವಾಗ ಇಂಟರ್ನಿಯೊಬ್ಬರಿಗೆ ಕೊಟ್ಟು ಈ ಡಿಸೈನ್ ಮಾಡಿರುವ ಹಾಗೆ ಕಾಣುತ್ತಿದೆ. ದೇಶದಲ್ಲಿರುವ ಶ್ರೀಮಂತ ಜವಳಿ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಇದು ಅವಮಾನವಲ್ಲದೆ ಎಂದು ಟೀಕೆ ಮಾಡಿದ್ದಾರೆ.
ಈ ವಿರೋಧ ವ್ಯಕ್ತಪಡಿಸಿದ ಜನರೆಲ್ಲರೂ ವಿದೇಶಿ ಸಂಸ್ಕೃತಿಯ ಅಡಿಯಾಳುಗಳು.ನಮ್ಮತನ ಅಥವಾ ಸ್ವದೇಶಿ ಪರಿಕಲ್ಪನೆಯ ಲವಲೇಶವೂ ತಿಳಿಯದ ಆಕ್ಸ್ಫರ್ಡ್ ಶಿಕ್ಷಿತರೆಂದುಕೊಂಡ ಮೂಢರು. ಈ ಅಭಿಮಾನಶೂನ್ಯರ ಅಭಿಪ್ರಾಯಗಳಿಗೆ ಬೆಲೆ ಕೊಡುವ ಅಥವಾ ಪ್ರತಿಕ್ರಿಯೆ ವ್ಯಕ್ತಪಡಿಸುವ ಕನಿಷ್ಠ ಸೌಜನ್ಯವನ್ನು ಬೇಡವೇ ಬೇಡ.