ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವರುಣನ ಆರ್ಭಟಕ್ಕೆ ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, 42 ವರ್ಷದ ಮಹಿಳೆ ಮತ್ತು ಆಕೆಯ ಮಗಳು ಪ್ರಾಕೃತಿಕ ವಿಕೋಪದಲ್ಲಿ ದುರಂತ ಸಾವಿಗೀಡಾಗಿದ್ದಾರೆ.
ತೆಹ್ರಿ ಜಿಲ್ಲೆಯ ಬುಧಕೇದಾರ್ ಬಳಿಯ ಟೋಲಿ ಗ್ರಾಮದ ಸರಿತಾ ದೇವಿ (46) ಮತ್ತು ಆಕೆಯ ಮಗಳು 15 ವರ್ಷದ ಅಂಕಿತಾ ಮೃತ ದುರ್ದೈವಿಗಳು. ಕುಸಿದು ಬಿದ್ದಿದ್ದ ಮನೆಯ ಅವೇಶಗಳ ನಡುವೆ ಸಿಲುಕಿದ್ದ ಇಬ್ಬರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ಮಾತನಾಡಿ, ಮನೆಯ ಹಿಂದೆಗಡೆ ಇದ್ದ ತಡೆಗೋಡೆ ಕುಸಿದು ಅಮ್ಮ-ಮಗಳು ಇಬ್ಬರು ಜೀವಂತ ಸಮಾಧಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಉತ್ತರಾಖಂಡದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಮನೆಗಳು ಮತ್ತು ಅಂಗಡಿಗಳು ಕೊಚ್ಚಿಹೋಗಿವೆ. ಸೇತುವೆಗಳು ಮತ್ತು ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿವೆ. ಭೂಕುಸಿತದಿಂದ ಹಾನಿಗೊಳಗಾದ ಎಲ್ಲರಿಗೂ ತಕ್ಷಣದ ನೆರವು ನೀಡುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.