ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ವಿಶೇಷ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ನಿನ್ನೆ ಹಳೆ ಕಟ್ಟಡದಲ್ಲಿ ಕಲಾಪ ಶುರುವಾಗಿದ್ದರೂ ಎರಡನೇ ದಿನದ ಕಲಾಪ ಹೊಸ ಭವನದಲ್ಲಿ ನಡೆಯಲಿದೆ.
ಇಂದು ನೂತನ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ನಡೆಯಲಿದ್ದು, ಮಂಗಳವಾರ ಮಧ್ಯಾಹ್ನ 2:15ಕ್ಕೆ ಕಟ್ಟಡದ ಮೇಲ್ಮನೆ ಚೇಂಬರ್‌ನಲ್ಲಿ ರಾಜ್ಯಸಭೆ ಸಮಾವೇಶಗೊಂಡರೆ, ಕೆಳಮನೆ ಕೊಠಡಿಯಲ್ಲಿ ಮಧ್ಯಾಹ್ನ 1:15 ಕ್ಕೆ ಲೋಕಸಭೆ ಕಲಾಪ ಆರಂಭವಾಗಲಿದೆ. ಇನ್ನು ಮುಂದೆ ಹೊಸ ಕಟ್ಟಡದಲ್ಲಿಯೇ ಸಂಸತ್ತಿನ ಚಟುವಟಿಕೆಗಳು ಮುಂದುವರಿಯಲಿವೆ.
ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಿದರು. ಪ್ರಧಾನಿ ಮೋದಿ ಅವರೊಂದಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಉಪಸ್ಥಿತರಿದ್ದರು. ನೂತನ ಸಂಸತ್ ಭವನವನ್ನು ಉದ್ಘಾಟಿಸುವ ಮುನ್ನ ಪ್ರಧಾನಿ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನದಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಲೋಕಸಭೆ ಸಭಾಂಗಣದಲ್ಲಿ ಸಭೆ ನಡೆಯಿತು.