ಹೊಸದಿಗಂತ ವರದಿ,ಹುಬ್ಬಳ್ಳಿ:
ರಾಮನಗರದಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಮಾತನಾಡುವಾಗ ಮುನ್ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ ಕಾಂಗ್ರೆಸ್ಸಿನ ಸಂಸದ ಡಿ.ಕೆ. ಸುರೇಶ್ ತೋರಿದ ವರ್ತನೆ ಖಂಡನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ.
ಸಂವಿದಾನ ಗೌರವಿಸದ ಕಾಂಗ್ರೆಸ್ ನವರು ಗೂಂಡಾಗಳ ಪಕ್ಷ ರಾಜ್ಯದ ಮುಖ್ಯಮಂತ್ರಿಯವರ ಮುಂದೆ ಸಚಿವ ಡಾ. ಅಶ್ವತ್ಥನಾರಾಯಣ ಅವರ ಮೇಲೆ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ ಅದೇ ಪಕ್ಷದ ಎಂ.ಎಲ್.ಸಿ. ಎಸ್. ರವಿ ಹಲ್ಲೆಗೆ ಯತ್ನಿಸಿದ್ದು ಅತ್ಯಂತ ಖಂಡನೀಯ, ಕಾಂಗ್ರೆಸ್ ಪಕ್ಷದವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅವರದ್ದು ಗೂಂಡಾ ರಾಜಕಾರಣ ಎಂದು ಆರೋಪಿಸಿದ್ದಾರೆ.
ಹಲ್ಲೆ ಮಾಡಲು ಮುಂದಾಗಿದ್ದು, ಮೈಕ್ ಕಿತ್ತೆಸೆದಿದ್ದಾರೆ. ಎಂ.ಎಲ್.ಸಿ. ರವಿ ಅವರು ಡಿ.ಕೆ.ಸುರೇಶ್ ಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವ ರೀತಿಯಲ್ಲಿ ತಮ್ಮ ತೋಳ್ಬಲದ ರಾಜಕೀಯ ಪ್ರದರ್ಶಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಗೂಂಡಾ ಪ್ರವೃತ್ತಿಗೆ ಕೈಗನ್ನಡಿಯಾಗಿದೆ. ಕಾಂಗ್ರೆಸ್ ಹಿಂದಿನಿಂದಲೂ ತೋಳ್ಬಲದಿಂದ ತಮ್ಮ ಸಾಮರ್ಥ್ಯ ತೋರುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಸಂಸತ್ತಿನಲ್ಲೂ ಸಹ ಈ ಹಿಂದೆ ಕಾಂಗ್ರೆಸ್ ಪಕ್ಷದವರು ತೋರಿದ ವರ್ತನೆ ದೇಶದ ಜನತೆ ಇನ್ನೂ ಮರೆತಿಲ್ಲ. ಜನಪರ ಕಾರ್ಯಗಳನ್ನು ನೀಡಿದ ಪ್ರಧಾನಿ ನರೇಂದ್ರಮೋದಿಯವರ ಅಭಿವೃದ್ಧಿ ಚಿಂತನೆ ಮತ್ತು ಅನುಷ್ಠಾನ ಗಮನಿಸಿ ಜನರು ದೇಶದೆಲ್ಲೆಡೆ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ ನೆಡದ ವಿಧಾನಸಭಾ ಉಪಚುನಾವಣೆ, ಗ್ರಾಮ ಪಂಚಾಯತ ಚುನಾವಣೆಯಲ್ಲೂ ಜನರು ಕಾಂಗ್ರೆಸ್ಸಿಗರ ವಿರುದ್ಧ ಮತ್ತು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಇಷ್ಟಾದರೂ ಕಾಂಗ್ರಸ್ ಪಕ್ಷದವರೂ ಬುದ್ದಿ ಕಲಿತಿಲ್ಲ, ಈ ಮಾದರಿಯ ಗುಂಡಾವರ್ತನೆ ಮತ್ತು ದರ್ಪದ ರಾಜಕಾರಣಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.