Tuesday, March 28, 2023

Latest Posts

‘ವಿಜಯ ಸಂಕಲ್ಪ’ ಅಭಿಯಾನದಲ್ಲಿ ಭಾಗಿಯಾದ ಸಚಿವ ಪ್ರಭು ಚವ್ಹಾಣ್

ಹೊಸ ದಿಗಂತ ವರದಿ, ಬೀದರ:

ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ಅವರು ಭಾರತೀಯ ಜನತಾ ಪಕ್ಷ ಔರಾದ ಮಂಡಲ ವತಿಯಿಂದ ಚಿಂತಾಕಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಸಚಿವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವದಲ್ಲಿದ್ದು, ನಾಡಿನಲ್ಲಿ ಹಿಂದೆಂದೂ ಆಗದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಹಿಂದೆ ಸರ್ಕಾರದ ಸೌಲಭ್ಯಗಳು ಸಾರ್ವಜನಿಕರಿಗೆ ತಲುಪಲು ನಾನಾ ರೀತಿಯ ತೊಡಕುಗಳನ್ನು ಎದುರಿಸಬೇಕಾಗಿತ್ತು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸರ್ಕಾರದ ಯೋಜನೆಗಳು ಪಾರದರ್ಶಕವಾಗಿವೆ. ಸರ್ಕಾರದ ಸೌಲಭ್ಯದ ಮೊತ್ತ ಡಿಬಿಟಿ ಮೂಲಕ ಫಲಾನುಭವಿಯ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ ಎಂದು ಹೇಳಿದರು.

ನಾನು ಶಾಸಕನಾದ ನಂತರ ಔರಾದ(ಬಿ) ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ತಂದು ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂಬ ಸಂಕಲ್ಪದೊಂದಿಗೆ ಕೆಲಸಕ್ಕೆ ಇಳಿದಿದ್ದೆ. ಅದಕ್ಕೆ ಬೇಕಿರುವ ರಸ್ತೆ, ನೀರು, ವಿದ್ಯುತ್ ಪೂರೈಕೆಯಂತಹ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿಯೇ ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆದಿವೆ ಎಂದರು.

ಔರಾದ(ಬಿ) ಕ್ಷೇತ್ರದಲ್ಲಿ ಕೋಟ್ಯಾಂತರ ಮೊತ್ತದ ಅಭಿವೃದ್ಧಿ ಕೆಲಸಗಳು ನಡೆದಿವೆ. ಶಾಲಾ-ಕಾಲೇಜುಗಳು, ವಸತಿ ನಿಲಯಗಳು, ಆಸ್ಪತ್ರೆಗಳು, ಬ್ರಿಜ್ ಕಂ ಬ್ಯಾರೇಜ್, ರಸ್ತೆ, ಕುಡಿಯುವ ನೀರು ಹೀಗೆ ಸಾಕಷ್ಟು ಕೆಲಸಗಳಾಗಿವೆ. ಪ್ರತಿಯೊಂದು ಊರಿನಲ್ಲಿ ಕೆಲಸಗಳಾಗಿವೆ. ಕಾರ್ಯಕರ್ತರು ಅಭಿವೃದ್ಧಿ ಕೆಲಸಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕು. ವಿಜಯ ಸಂಕಲ್ಪ ಅಭಿಯಾನ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಯಬೇಕು ಎಂದು ಸಚಿವರು ಹೇಳಿದರು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಪಕ್ಷದಿಂದ ರಾಜ್ಯದ ಎಲ್ಲ ಬೂತ್ ಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಔರಾದ(ಬಿ) ಕ್ಷೇತ್ರದಲ್ಲಿ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮುಖಂಡರಾದ ವಸಂತ ಬಿರಾದಾರ, ದೊಂಡಿಬಾ ನರೋಟೆ, ಸಾಗರ ಪಾಟೀಲ ಕೊಳ್ಳೂರ, ಸಚಿನ್ ರಾಠೋಡ, ಶೇಷರಾವ ಕೋಳಿ, ರಮೇಶ ಬಿರಾದರ, ಖಂಡೋಬಾ ಕಂಗಟೆ, ಎಂ.ಡಿ ಸಲಾವುದ್ದೀನ್, ರವೀಂದ್ರ ರೆಡ್ಡಿ, ಸಂಜು ರೆಡ್ಡಿ, ವಿಸ್ತಾರಕ ಪ್ರಕಾಶ ಮಾನೆ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!