ದೇಶ ವಿಭಜನೆಯ ಚರಿತ್ರೆ ಕಟ್ಟಿಕೊಡುವ ರಾಮ್‌ ಮಾಧವರ ಕೃತಿ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದಲ್ಲಿ 1905 ರಲ್ಲಿ ಒಂದು ರಾಜ್ಯವನ್ನು ವಿಭಜಿಸುತ್ತಾರೆನ್ನುವಾಗ ಇಡೀ ರಾಷ್ಟ್ರ ಒಂದಾಗಿತ್ತು, ಆದರೆ ವಿಪರ್ಯಾಸವೆಂದರೆ 1947 ರಲ್ಲಿ ಇಡೀ ದೇಶ ವಿಭಜನೆಯಾಗುವಾಗ ರಾಷ್ಟ್ರ ಒಂದಾಗಲಿಲ್ಲ. ಇಂಥಹ ಘಟನೆಗಳನ್ನಿಟ್ಟುಕೊಂಡು ವಿಭಜನೆಯಾದ ಸ್ವಾತಂತ್ರ್ಯ ಕೃತಿ ಬರೆಯಲಾಗಿದೆ ಎಂದು ಲೇಖಕ ಹಾಗು ಚಿಂತಕ ರಾಮ್ ಮಾಧವ್ ಹೇಳಿದರು.

ಅವರು ಮಂಥನ ಬೆಂಗಳೂರು ವತಿಯಿಂದ ಶುಕ್ರವಾರ ಐಐಎಸ್ಸಿಯ ಸತೀಶ್ ಧವನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಭಜನೆಯಾದ ಸ್ವಾತಂತ್ರ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದು ಮತ್ತು ಮುಸ್ಲಿಮರ ಮಧ್ಯೆ ಭೇದ ಮಾಡಿ, ಪಶ್ಚಿಮ ಬಂಗಾಳವನ್ನು ವಿಭಜನೆ ಮಾಡುವುದಕ್ಕೆ ಬ್ರಿಟಿಷರು ಮುಂದಾದಾಗ ವಂಗಭಂಗ ಚಳವಳಿಯ ಮೂಲಕ ಎಲ್ಲರೂ ಒಂದಾಗಿದ್ದರು. ಈ ಚಳುವಳಿ ಆರಂಭವಾಗಿ 6 ವರ್ಷಗಳ ನಂತರ 1911ರಲ್ಲಿ ವಿಭಜನೆಯನ್ನು ರದ್ದುಪಡಿಸಲಾಯಿತು. ಇದಾಗಿ ಮೂರುವರೆ ದಶಕಗಳ ನಂತರ 1947 ರಲ್ಲಿ ಮೊಹಮ್ಮದ್‌ ಅಲಿ ಜಿನ್ನಾ ಬೇಡಿಕೆಯಂತೆ ಭಾರತದಿಂದ ಪಾಕಿಸ್ತಾನವನ್ನು ವಿಭಜಿಸಿ ಸ್ವಾತಂತ್ರ್ಯ ನೀಡಲಾಯಿತು ಎಂದು ಹೇಳಿದರು.

ಕಾಂಗ್ರೆಸ್ ಸೇರಿದ್ದ ಜಿನ್ನಾ 19ನೇ ಶತಮಾನದಲ್ಲಿ ಭಾರತದಲ್ಲಿ ತನ್ನ ರಾಜಕೀಯ ಜೀವನ ಆರಂಭಿಸಿದರು. ಬಂಗಾಳ ಐಕ್ಯವಾಗಿರಲು ವಂದೇ ಮಾತರಂ ಚಳವಳಿಯನ್ನು ಆರಂಭಿಸಿದ್ದ ಜಿನ್ನಾ ಮೊದಲಿಗೆ ಮುಸ್ಲಿಂ ಲೀಗ್ ಆರಂಭಿಸಲು ವಿರೋಧ ವ್ಯಕ್ತಪಡಿಸಿದ್ದರು. ಲಖನೌನಲ್ಲಿ ಮುಸ್ಲಿಂ ಲೀಗ್ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದಾಗ 1920 ರಲ್ಲಿ ಕಾಂಗ್ರೆಸ್ ಬಿಟ್ಟು ಮುಸ್ಲಿಂ ಲೀಗ್ ಸೇರಿದರು. 1935 ರಲ್ಲಿ ಭಾರತದಲ್ಲಿ ಮುಸ್ಲಿಂ ನಾಯಕರಾಗಿದ್ದ ಜಿನ್ನಾ ದಶಕದ ಬಳಿಕ ಪಾಕಿಸ್ತಾನದ ಹುಟ್ಟಿಗೆ ಕಾರಣರಾದರು ಎಂದು ರಾಮ್ ಮಾಧವ್ ವಿವರಿಸಿದರು.

ಜಿನ್ನಾ ಮತ್ತು ಗಾಂಧೀಜಿ ಲಂಡನ್‌ನಲ್ಲಿ ಕಾನೂನು ಶಿಕ್ಷಣ ಪಡೆದಿದ್ದರು, ಭಾರತದಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಆದಾಗ್ಯೂ ಗಾಂಧೀಜಿ ಮತ್ತು ಜಿನ್ನಾ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಜಿನ್ನಾ ಮುಂದೆ ಗಾಂಧೀಜಿ ನಾಯಕತ್ವ ಮತ್ತು ವ್ಯಕ್ತಿತ್ವ ಬಹುದೊಡ್ಡದು. ಅವರು ಭಾರತ ಮತ್ತು ದಕ್ಷಿಣ ಆಫ್ರಿಕಾದ ಸನ್ನಿವೇಶಗಳು ಭಿನ್ನವಾದುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದಲ್ಲಿ ವಿಫಲರಾಗಿದ್ದರು. ಮುಸ್ಲಿಂ ಲೀಗ್ ಜೊತೆ ಹೊಂದಾಣಿಕೆ ಮಾಡುವುದರಿಂದ ಭಾರತ ಸ್ವಾತಂತ್ರ್ಯಕ್ಕೆ ಸಹಾಯವಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಅವರ ನಡೆಯಿಂದ ಅಖಂಡ ಭಾರತದ ಸ್ವಾತಂತ್ರ್ಯ ಬಯಸಿದ್ದರೂ ಅದು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ರಾಮ್ ಮಾಧವ್ ಅವರ ಪಾರ್ಟಿಶನ್ಡ್ ಫ್ರೀಡಂ ಪುಸ್ತಕವನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಕಿರಣ್ ಕುಮಾರ್ ಎಸ್. ಸಮನ್ವಯಕರಾಗಿ ಭಾಗವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!