ಪಾಟೀದಾರ್, ಕೊಹ್ಲಿ ಭರ್ಜರಿ ಅರ್ಧಶತಕ: ಹೈದರಾಬಾದ್ ಗೆ ಸವಾಲಿನ ಗುರಿ ಕೊಟ್ಟ ಬೆಂಗಳೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಜತ್ ಪಾಟೀದಾರ್ ಹಾಗೂ ಕೊಹ್ಲಿ ಭರ್ಜರಿ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 206 ರನ್ ಬಾರಿಸಿದ್ದು, ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದ ಆರ್‌ಸಿಬಿ ತಂಡಕ್ಕೆ ನಾಯಕ ಫಾಫ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. 3.5 ಓವರ್‌ಗಳಲ್ಲಿ ಈ ಜೋಡಿ 48 ರನ್‌ಗಳ ಜತೆಯಾಟವಾಡಿತು. ಫಾಫ್ ಡು ಪ್ಲೆಸಿಸ್ 12 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 25 ರನ್ ಬಾರಿಸಿ ನಟರಾಜನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ವಿಲ್ ಜ್ಯಾಕ್ಸ್ ಕೇವಲ 6 ರನ್ ಗಳಿಸಿ ಮಯಾಂಕ್ ಮಾರ್ಕಂಡೆಗೆ ವಿಕೆಟ್ ಒಪ್ಪಿಸಿದರು.

ಕೇವಲ 65 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಆರ್‌ಸಿಬಿ ತಂಡಕ್ಕೆ ಮೂರನೇ ವಿಕೆಟ್‌ಗೆ ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ ಆಸರೆಯಾದರು. ಒಂದು ಕಡೆ ರಜತ್ ಪಾಟೀದಾರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರೆ, ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಮೂರನೇ ವಿಕೆಟ್‌ಗೆ ಈ ಜೋಡಿ ಸ್ಪೋಟಕ 65 ರನ್‌ಗಳ ಜತೆಯಾಟವಾಡಿತು. ಪಾಟೀದಾರ್ ಕೇವಲ 20 ಎಸೆತಗಳನ್ನು ಎದುರಿಸಿ 2 ಬೌಂಡರಿ 5 ಸಿಕ್ಸರ್ ಸಹಿತ 50 ರನ್ ಸಿಡಿಸಿ ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 51 ರನ್ ಬಾರಿಸಿ ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಕ್ಯಾಮರೋನ್ ಗ್ರೀನ್ 20 ಎಸೆತಗಳನ್ನು ಎದುರಿಸಿ ಅಜೇಯ 37 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಉನಾದ್ಕತ್ 30 ರನ್ ನೀಡಿ 3 ವಿಕೆಟ್ ಪಡೆದರೆ, ಟಿ ನಟರಾಜನ್ 2 ಹಾಗೂ ಪ್ಯಾಟ್ ಕಮಿನ್ಸ್, ಮಯಾಂಕ್ ಮಾರ್ಕಂಡೆ ತಲಾ ಒಂದೊಂದು ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!