Monday, November 28, 2022

Latest Posts

ರೋಗಿಗಳು ತುರ್ತು ಪರಿಸ್ಥಿತಿಯಲ್ಲಿ ಯಾವುದೇ ದಾಖಲೆ ನೀಡಬೇಕಿಲ್ಲ: ಸಚಿವ ಸುಧಾಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು , ವೈದ್ಯಾಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡರೆ ಅವರನ್ನು ಕೆಲಸದಿಂದಲೇ ವಜಾ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ನವಜಾತ ಶಿಶುಗಳ ಮರಣದ ದುರ್ಘಟನೆ ಕುರಿತುಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣುಮಗಳನ್ನು ಬಾಲಕಿಯರ ಮಂದಿರಕ್ಕೆ ದಾಖಲಿಸಲಾಗಿದೆ. ಆಕೆಗೆ ಸರ್ಕಾರದಿಂದಲೇ 5 ಲಕ್ಷ ರೂ. ಎಫ್‌ಡಿ ಇರಿಸಲು ಕ್ರಮ ವಹಿಸಲಾಗಿದೆ. ಹಾಗೆಯೇ ಆಕೆಯ ಶೈಕ್ಷಣಿಕ ಭವಿಷ್ಯವನ್ನೂ ರೂಪಿಸಲಾಗುವುದು. ಈ ಘಟನೆಯಲ್ಲಿ ಅಮಾನವೀಯವಾಗಿ ನಡೆದುಕೊಂಡ ವೈದ್ಯರು, ಸಿಬ್ಬಂದಿಗೆ ಹಾಗೂ ಜಿಲ್ಲಾ ಸರ್ಜನ್‌ ಗೆ, ಆಡಳಿತ ವೈಫಲ್ಯ ಎಂದು ಪರಿಗಣಿಸಿ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. 24 ಗಂಟೆಯೊಳಗೆ ಉತ್ತರ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ವಜಾ ಮಾಡಲು ಕಾನೂನಿನಲ್ಲಿ ಬದಲಾವಣೆ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ ತರಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಈ ರೀತಿಯ ಘಟನೆ ಎಂದೂ ಮರುಕಳಿಸಬಾರದು. ಅದಕ್ಕಾಗಿ ಎಲ್ಲಾ ಕ್ರಮಗಳನ್ನು ವಹಿಸಲಾಗಿದೆ. ಯಾವುದೇ ರೋಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಾಗ ಯಾವ ದಾಖಲೆಗಳೂ ಮುಖ್ಯವಲ್ಲ. ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ಗಳನ್ನು ಚಿಕಿತ್ಸೆ ನೀಡಿದ ಬಳಿಕವೂ ಕೇಳಬಹುದು. ಈ ಬಗ್ಗೆ ಹಿಂದಿನಿಂದಲೂ ಸೂಚನೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ 76 ತುರ್ತು ಸೇವೆಗಳನ್ನು ಜೋಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೇವೆಗಳು ಇಲ್ಲವಾದರೆ, ಖಾಸಗಿ ಆಸ್ಪತ್ರೆಯಲ್ಲಿ ಆ ಸೇವೆ ಪಡೆಯಬಹುದು. ಆಗ ಸರ್ಕಾರವೇ ವೆಚ್ಚ ಭರಿಸುತ್ತದೆ ಎಂದರು.

ಈ ಕುಟುಂಬದ ಸಂಬಂಧಿಕರನ್ನು ಪತ್ತೆ ಮಾಡಲು 36 ಗಂಟೆಗಳಿಂದ ಪೊಲೀಸರು ಶ್ರಮಿಸುತ್ತಿದ್ದಾರೆ. ಆದರೆ ಯಾರೂ ಇನ್ನೂ ಮುಂದೆ ಬಂದಿಲ್ಲ. ಇಂತಹ ಪರಿಸ್ಥಿತಿ ಇದ್ದರೂ, ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಎಂದರು.

ಗರ್ಭಿಣಿ ಯಾವುದೇ ರಾಜ್ಯದವರಾಗಿದ್ದರೂ, ದಾಖಲೆ ಇಲ್ಲದಿದ್ದರೂ ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಬೇಕಿತ್ತು. ಮಾನವೀಯತೆಯಿಂದ ಅವರೊಂದಿಗೆ ನಡೆದುಕೊಳ್ಳಬೇಕಿತ್ತು. ಇಲ್ಲಿ ದಾಖಲೆ ಮುಖ್ಯವಲ್ಲ, ಜೀವ ಮುಖ್ಯ. ಕೆಲವರಿಂದ ಆದ ಈ ಘಟನೆಯಿಂದ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!