ಪಟ್ಟಾಂಬಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 65 ವರ್ಷದ ವ್ಯಕ್ತಿಗೆ 83 ವರ್ಷ ಜೈಲು ಶಿಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 65 ವರ್ಷದ ವ್ಯಕ್ತಿಯೋರ್ವರಿಗೆ ಕೇರಳದ ನ್ಯಾಯಾಲಯವು 83 ವರ್ಷ ಜೈಲು ಶಿಕ್ಷೆ ನೀಡಿ ತೀರ್ಪಿತ್ತಿದೆ.
ಬಾಲಕಿಯು ಈ ವ್ಯಕ್ತಿಯ ಸಂಬಂಧಿಯೇ ಆಗಿದ್ದು, ಆಕೆಯ ಮನೆಯಲ್ಲೇ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ. ಜೊತೆಗೆ ಇದನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಕೂಡಾ ಒಡ್ಡಿದ್ದ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಬಾಲಕಿಯು ತನ್ನ ಮೇಲೆ ದೌರ್ಜನ್ಯವಾಗಿರುವ ಬಗ್ಗೆ ಶಿಕ್ಷಕಿಯೊಬ್ಬರಿಗೆ ತಿಳಿಸಿದ್ದಳು. ಬಳಿಕ ಪ್ರಕರಣವು ಮಕ್ಕಳ ಸೇವಾ ಇಲಾಖೆಯ ಗಮನಕ್ಕೆ ಬಂದಿದ್ದು, ಅವರ ಮಾಹಿತಿಯ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪಟ್ಟಾಂಬಿ ತ್ವರಿತ ಗತಿ ವಿಶೇಷ ನ್ಯಾಯಾಲಯ ಅಪರಾಧಿಗೆ ಜೈಲು ಶಿಕ್ಷೆಯೊಂದಿಗೆ 4.3 ಲಕ್ಷ ರೂ. ದಂಡ ವಿಧಿಸಿದ್ದು, ಆ ಹಣವನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ.
ಗರಿಷ್ಠ 40 ವರ್ಷಗಳವರೆಗೆ ಮಾತ್ರ ಅಪರಾಧಿ ಜೈಲಿನಲ್ಲಿ ಇರಬಹುದಾಗಿದ್ದು, ಈ ಪ್ರಕರಣದ ಅಪರಾಧಿಗೂ ಅದು ಅನ್ವಯವಾಗಲಿದೆ ಎಂದೂ ನ್ಯಾಯಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!